ಮಳವಳ್ಳಿ: ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಸೋಮವಾರ ಸಭೆ ಆಯೋಜಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಸೋಮವಾರ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಈ ರೀತಿಯ ದೂರುಗಳಿಗೆ ಆಸ್ಪದವಿಲ್ಲದಂತೆ ಆಯೋಜಿಸಬೇಕು. ಒಂದು ವೇಳೆ ಅನಿವಾರ್ಯ ಕಾರಣದಿಂದ ಕುಂದು ಕೊರತೆ ಸಭೆ ಆಯೋಜಿಸಲು ಸಾಧ್ಯವಾಗಿಲ್ಲದಿದ್ದಲ್ಲಿ, ಮರುದಿನವೇ ಮಾಡಬೇಕು. ಮುಖ್ಯವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.
ಸೋಮವಾರದ ಸಭೆ ಕುರಿತು ವ್ಯಾಪಕ ಪ್ರಚಾರವನ್ನು ಮಾಡಬೇಕು. ಸ್ವಚ್ಛ ಭಾರತ ಮಿಷನ್ ಯೋಜನೆ ಆಟೋ ಹಾಗೂ ಟಾಂಟಾಂ ಹಾಕಿಸುವ ಮೂಲಕ ಪ್ರಚಾರ ಮಾಡಬೇಕು. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಇ-ಸ್ವತ್ತು ಸೇರಿದಂತೆ ಇತರೆ ವಿಷಯಕ್ಕೆ ಸಾರ್ವಜನಿಕರನ್ನು ಅಲೆದಾಡಿಸದೇ ತ್ವರಿತವಾಗಿ ಕ್ರಮವಹಿಸಬೇಕು. ಸರ್ಕಾರದ ಯೋಜನೆ ಹಾಗೂ ಅವುಗಳ ಅನುಷ್ಟಾನಕ್ಕೆ ಇರುವ ನಿಯಮದ ಬಗ್ಗೆ ಗ್ರಾಪಂ ಹಂತದಲ್ಲಿಯೇ ಸೂಕ್ತ ಮಾಹಿತಿ ನೀಡಿದಲ್ಲಿ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಹೇಳಿದರು.
ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿಗೆ ಇ-ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಮಾತ್ರವಲ್ಲದೆ ಕಚೇರಿ ಅವಧಿ ಮುಗಿಯುವವರೆಗೂ ಸಾರ್ವಜನಿಕರಿಗೆ ಲಭ್ಯವಿರಬೇಕು. ನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ನಮೂನೆ 6 ಅನ್ನು ಸಲ್ಲಿಸಿದ ತಕ್ಷಣವೇ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಉದ್ಯೋಗ ಒದಗಿಸಲು ಕ್ರಮವಹಿಸಬೇಕು. ಪೂರ್ವಭಾವಿಯಾಗಿ ಸಮುದಾಯ ಆಧಾರಿತ ಕಾಮಗಾರಿ ಗುರುತಿಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳಲು ಕ್ರಮವಹಿಸಬೇಕು. 60:40 ಅನುಪಾತ ಹಾಗೂ ಡಿ.ಪಿ.ಸಿ ಲಾಗಿನ್ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿಗಳನ್ನು ನೀಡದೇ ಸರಿಯಾದ ಮಾಹಿತಿ ನೀಡಬೇಕು. ನರೇಗಾ ಯೋಜನೆಯಡಿ ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗದಂತಹ ದೂರು ಬಂದ ತಕ್ಷಣವೇ ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಸೂಕ್ತ ತನಿಖೆ ನಡೆಸಿ ಜಿಪಂಗೆ ವರದಿ ಸಲ್ಲಿಸಬೇಕು. ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಬೇಕು ಎಂದು ತಿಳಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರು, ತಾ.ಪಂ ಇಒ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಇತರರಿದ್ದರು. ಇದೇ ವೇಳೆ ಅಕ್ಕ ಕೆಫೆ ಹಾಗೂ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಯಿತು. ಅಂತೆಯೇ ತಾಪಂ ಕಚೇರಿಯ ವಿವಿಧ ಶಾಖೆಗೆ ಭೇಟಿ ನೀಡಿ ಸ್ವಚ್ಛತೆ, ಸಾರ್ವಜನಿಕರಿಗೆ ಕಲ್ಪಿಸಲಾಗಿರುವ ಮೂಲ ಸೌಕರ್ಯ, ಅಭಿಲೇಖಾಲಯ ನಿರ್ವಹಣೆ, ಬಾಕಿ ಕಡತ ಸೇರಿದಂತೆ ಇತರೆ ವಿಷಯಗಳ ಕುರಿತು ಮಾಹಿತಿ ಪಡೆದರು.