ಸೊರಬ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವಹಿಸಿದ ಗಣೇಶೋತ್ಸವ ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ ಎಂದು ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.
ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ನೇತೃತ್ವದಲ್ಲಿ ವಿಶ್ವ ಹಿಂದು ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮನೆ ಮತ್ತು ದೇಗುಲಗಳಲ್ಲಿ ಮಾತ್ರ ನಡೆಯುತ್ತಿದ್ದ ಗಣಪತಿ ಹಬ್ಬವನ್ನು ಬಾಲಗಂಗಾಧರ ತಿಲಕರು ಸಾರ್ವಜನಿಕವಾಗಿ ಆಚರಿಸುವ ಮೂಲಕ ಜನರನ್ನು ಒಂದೇ ವೇದಿಕೆಗೆ ತಂದರು. ಬ್ರಿಟಿಷರ ದಾಸ್ಯದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಜನರಲ್ಲಿ ಧರ್ಮ ಜಾಗೃತಿಯ ಜತೆಗೆ ದೇಶಭಕ್ತಿ ಮತ್ತು ಏಕತಾ ಶಕ್ತಿಗೆ ಮುನ್ನುಡಿ ಬರೆದರು. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಯುವ ಜನತೆಗೆ ಸಂಸ್ಕಾರ ಮತ್ತು ನೆಲದ ಪರಂಪರೆಯನ್ನು ತಿಳಿಸಿಕೊಡುವ ಯತ್ನವಾಗಬೇಕಿದೆ ಎಂದರು.
ದೇಶ, ಧರ್ಮದ ವಿಷಯದಲ್ಲಿ ತೊಂದರೆಗಳಾದರೆ ತಡೆದು ನಿಲ್ಲಿಸುವ ಸಾಮರ್ಥ್ಯ ಮಕ್ಕಳಲ್ಲಿ ಮೂಡಬೇಕೆಂಬ ಉದ್ದೇಶದಿಂದ ಹಿರಿಯರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಿದರು. ಗಣೇಶನನ್ನು ಪ್ರಾರ್ಥಿಸಿದರೆ ಎದುರಾಗುವ ಎಲ್ಲ ವಿಘ್ನಗಳು ನಾಶವಾಗುತ್ತವೆ ಎಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಸಂಭ್ರಮದ ಹಬ್ಬವಾಗಿದೆ. ಸಮಾಜವನ್ನು ಬೆಸೆಯುವ ಹಬ್ಬವಾಗಿ ವಿಶ್ವದಲ್ಲಿಯೂ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ ಎಂದು ತಿಳಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಶ್ವ ಹಿಂದು ಮಹಾಸಭಾದಿಂದ ಶ್ರೀಗಳನ್ನು ಗೌರವಿಸಲಾಯಿತು. ವಿಶ್ವ ಹಿಂದು ಮಹಾಸಭಾ ಗೌರವಾಧ್ಯಕ್ಷ ಸಂಜೀವ ಆಚಾರ್, ಅಧ್ಯಕ್ಷ ನಿರಂಜನ್, ಖಜಾಂಚಿ ಎಸ್.ಎನ್.ಶರತ್, ಮಾತೃ ಮಂಡಳಿಯ ವಾಸಂತಿ ನಾವಡಾ, ವೀಣಾ ಶ್ರೀಧರ್, ಪ್ರಮುಖರಾದ ಎನ್.ಷಣ್ಮುಖಾಚಾರ್, ಚಂದನ್, ಶಶಿಕುಮಾರ್, ಉಮಾಶಂಕರ್, ಶರತ್, ನೆಮ್ಮದಿ ಶ್ರೀಧರ್, ವೀರೇಶ್, ಮಣಿಕಂಠ, ರಾಘು ಮಡಿವಾಳ, ಕಾರ್ತಿಕ್, ಪುನಿತಾ ಇತರಿದ್ದರು.