ಜಿಲ್ಲೆ

ಸಾರ್ವಜನಿಕ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ಕ್ರಮ

ಕೋಲಾರ ಡೆಸ್ಕ್

ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಿ | ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಸೂಚನೆ

ಕೋಲಾರ : ಜಿಲ್ಲೆಯಲ್ಲಿ ಗೌರಿ,ಗಣೇಶ ಹಾಗೂ ಈದ್​ ಮಿಲಾದ್​ ಹಬ್ಬವನ್ನು ಶಾಂತಿ, ಸೌಹಾರ್ದಯುತವಾಗಿ ಆಚರಣೆ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಅರ್​.ರವಿ ಹೇಳಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗಣೇಶ ಹಾಗೂ ಈದ್​ ಮಿಲಾದ್​ ಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಯಾವುದೇ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು, ಆದರೆ ಅಹಿತಕರ ಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕ ಬಳಸಬೇಕು. ಹಿರಿಯ ನಾಗರಿಕರು, ಮಕ್ಕಳು, ಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕ ಗಣೇಶ ಮಂಡಳಿಗಳು ನಿಗಾವಹಿಸಬೇಕು. ಮಾರ್ಗಸೂಚಿಯಂತೆ ಸ್ಥಳಿಯ ಸಂಸ್ಥೆ, ಪೊಲೀಸ್​ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಬೇಕು. ಏಕ ಗವಾಕ್ಷಿಯಲ್ಲಿ ನಿಗದಿತ ನಮೂನೆಯಲ್ಲಿ ಆಯೋಜಕರು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆ ಜಂಟಿ ತಪಾಸಣೆ ನಡೆಸಿ ನಿಯಮಾನುಸಾರ ಪರವಾನಗಿ ನೀಡಲು ಕ್ರಮ ವಹಿಸಬೇಕು. ರಾತ್ರಿ 10.30ರೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ರಸ್ತೆ ಮಧ್ಯೆ ಗಣೇಶನ ಪ್ರತಿಷ್ಠಾಪನೆ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ರಸ್ತೆ ನಡುವೆ ಗಣೇಶ ಪ್ರತಿಷ್ಠಾಪಿಸುವುದು ಬೇಡ. ಪರವಾನಗಿ ಪಡಯುವುದು ಕಡ್ಡಾಯ ಎಂದು ತಿಳಿಸಿದರು.

ಗಣೇಶ ವಿಸರ್ಜನೆಯ ದಿನ ನಿರಂತರ ವಿದ್ಯುತ್​ ಪೂರೈಸಲು ಬೆಸ್ಕಾಂ ಕ್ರಮ ವಹಿಸಬೇಕು. ಪೊಲೀಸರು ಬಂದೋಬಸ್ತ್​ ವ್ಯವಸ್ಥೆ ಕಲ್ಪಿಸಬೇಕು. ಗಣೇಶ ವಿಸರ್ಜನೆಯ ದಿನ ಸಂಚಾರಕ್ಕೆ ಅಡೆತಡೆಯಾಗದಂತೆ ಮೊದಲೇ ಸಂಚಾರ ಮಾರ್ಗ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಮುನ್ಸೂಚನೆ ನೀಡಬೇಕು ಎಂದು ತಿಳಿಸಿದರು.

ಪೊಲೀಸ್​ ಇಲಾಖೆ ಸೇರಿ, ಸಂಬಂಧಪಟ್ಟ ಇಲಾಖೆಗಳು ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಅಹಿತಕರ ಟನೆ ಸಂಭವಿಸುವ ಮುನ್ಸೂಚನೆಯಿದ್ದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್​.ಪಿ. ಬಾಗೇವಾಡಿ, ಕೆಜಿಎಫ್​ ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​, ಅಪರ ಜಿಲ್ಲಾಧಿಕಾರಿ ಮಂಗಳಾ, ಉಪ ವಿಭಾಗಾಧಿಕಾರಿ ಡಾ.ಎಚ್​.ಪಿ.ಎಸ್​.ಮೈತ್ರಿ, ಪೊಲೀಸ್​ ಉಪಾಧಿಕ್ಷಕ ಎಚ್​.ಎಂ.ನಾಗ್ತೆ ಇದ್ದರು.

ಪೊಲೀಸ್​ ಬಂದೋಬಸ್ತ್ :

ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸ್​ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಲಾಗುವುದು. ಸೆ.4ರಂದು 9ನೇ ದಿನಕ್ಕೆ ಮೂರ್ತಿಗಳ ವಿಸರ್ಜನೆಯಾಗಲಿದೆ. ಮರುದಿನ ಸೆ.5ಕ್ಕೆ ಈದ್​ ಮಿಲಾದ್​ ಇರುವ ಕಾರಣ ಪೊಲೀಸ್​ ಬಂದೋಬಸ್ತ್​ಗೆ ಒತ್ತಡ ಬೀಳಲಿದೆ. ಒಂಬತ್ತನೇ ದಿನದ ಗಣೇಶ ಮೂರ್ತಿಗಳನ್ನು ಬೇಗ ವಿಸರ್ಜನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಹೇಳಿದರು.

 ಪಿಒಪಿ ಪ್ರತಿಷ್ಠಾಪಿಸಿದರೆ ಕ್ರಮ :

ಮಾಲಿನ್ಯ ನಿಯಂತ್ರಣ ಅಧಿಕಾರಿ ಡಾ.ರಾಜು ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವ ಆಚರಣೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲೂ ಪಿಒಪಿ ಗಣೇಶ ಮೂರ್ತಿ ಹಾಗೂ ಪ್ಲಾಸ್ಟಿಕ್​ ಬಳಕೆ ನಿಷೇಧಿಸಲಾಗಿದೆ. ಕೋಲಾರ ನಗರದ ಜನತೆ ಸಹಕಾರ ನೀಡಬೇಕು. ಪಿಒಪಿ ಗಣೇಶ ಪೂರ್ತಿಗಳ ಮಾರಾಟ, ಪ್ರತಿಷ್ಠಾಪನೆ ಮಾಡಿರುವುದು ಕಂಡು ಬಂದರೆ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.