ಕೊಪ್ಪಳದಲ್ಲಿ ಡಿಸಿ ಎಸ್.ವಿಕಾಸ್ ಕಿಶೋರ್ ಅಧ್ಯಕ್ಷತೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಆಚರಣೆ ಕುರಿತು ಸಭೆ ನಡೆಯಿತು. ಎಸ್ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ.ಮಾರುತಿ ಇದ್ದರು. 
ಜಿಲ್ಲೆ

ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ನಿಷೇಧ

ಕೊಪ್ಪಳ: ಕರೊನಾ ಸೋಂಕು ಹರಡಿಕೆ ನಿಯಂತ್ರಣ ದೃಷ್ಟಿಯಿಂದ ಈ ಬಾರಿ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲಾದ್ಯಂತ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ-ಗಣೇಶ ಹಾಗೂ ಮೊಹರಂ ಹಬ್ಬ ಆಚರಣೆ ಕುರಿತು ಬುಧವಾರ ಸಮುದಾಯ ಮುಖಂಡರೊಡನೆ ಸಭೆ ನಡೆಸಿ ಮಾತನಾಡಿದರು. ಗಣೇಶ ಚತುರ್ಥಿ, ಮೊಹರಂ ಹಬ್ಬಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಇದರಿಂದ ಕರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ್ ಧರಿಸಿದರೂ ನೂಕುನುಗ್ಗಲಾಗುವುದು ಸಹಜ. ಆದ್ದರಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಹಾಗೂ ಮೊಹರಂ ಹಬ್ಬಗಳನ್ನು ನಿಷೇಧಿಸಿದ್ದೇವೆ.

ಜನರು ವೈಯಕ್ತಿಕವಾಗಿ ಹೆಚ್ಚು ಜನರನ್ನು ಸೇರಿಸದೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮನೆಯಲ್ಲಿಯೇ ಹಬ್ಬ ಆಚರಿಸಿಕೊಳ್ಳಬಹುದು. ಎಲ್ಲ ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಗಣೇಶ ಮೂರ್ತಿ ತಯಾರಕರು ಕಡ್ಡಾಯವಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳು ಕಂಡುಬಂದರೆ ಜಪ್ತಿ ಮಾಡಿ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮೂರ್ತಿ ತಯಾರಕರಿಗೆ ಸೂಚಿಸಿದರು.

ಎಡಿಸಿ ಎಂ.ಪಿ.ಮಾರುತಿ, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಡಿವೈಎಸ್‌ಪಿಗಳಾದ ವೆಂಕಟಪ್ಪ ನಾಯಕ, ಬಿ.ಪಿ.ಚಂದ್ರಶೇಖರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಸಾರ್ವಜನಿಕ ಗಣೇಶ ಪ್ರತಿಷ್ಠಾನ ಮಂಡಳಿಯ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.

ಕೋವಿಡ್-19 ಕಾರಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯ ಸಾರ್ವಜನಿಕ ಗಣೇಶ ಪ್ರತಿಷ್ಠಾಪನಗೆ ನಿರ್ಬಂಧಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿಯೂ ನಿಷೇಧಿಸಲಾಗಿದೆ. ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಹಬ್ಬ ಆಚರಿಸಬೇಕು.| ಜಿ.ಸಂಗೀತಾ, ಎಸ್ಪಿ