ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಸಾರ್ವಜನಿಕವಾಗಿ ಆಚರಿಸುವ ಗಣೇಶೋತ್ಸವ ಸಮಾಜದ ಒಗ್ಗಟ್ಟಿನ ಸಂಕೇತವಾಗಿದ್ದು, ಎಲ್ಲ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುತ್ತದೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಹೇಳಿದರು.ಬೈಪಾಸ್ ಗಣೇಶೋತ್ಸವ ಸಮಿತಿ ಬಿಎನ್ಆರ್ ಗ್ಲೋಬಲ್ ಅಕಾಡೆಮಿ ಮತ್ತು ಬಿ.ಎನ್.ಆರ್. ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶತಮಾನಗಳಿಂದ ಗಣೇಶೋತ್ಸವ ಆಚರಿಸುತ್ತಿದ್ದರೂ ಭಾರತೀಯ ಸ್ವಾತಂತ್ರ$್ಯ ಸಂಗ್ರಾಮದೊಂದಿಗೆ ಸಾರ್ವಜನಿಕ ಗಣೇಶೋತ್ಸವದ ಸಂಬಂಧ ಅನನ್ಯವಾದದ್ದು, ಗಣೇಶನ ಹಬ್ಬವನ್ನು ಸಾರ್ವಜನಿಕಗೊಳಿಸಿದ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಅವರು ಸ್ವಾತಂತ್ರ$್ಯ ಸಂಗ್ರಾಮದ ಸಮಯದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಲಿಸಲು ಸಾರ್ವಜನಿಕ ಗಣೇಶೋತ್ಸವಕ್ಕೆ ಕರೆ ನೀಡಿದರು. ಆ ಪರಂಪರೆ ಇಂದಿಗೂ ಮುಂದುವರಿಯುತ್ತಿದ್ದು, ಜಾತಿ, ಧರ್ಮ ಮೀರಿ ಜನ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಬೈಪಾಸ್ ಗಣೇಶೋತ್ಸವ ಸಮಿತಿ 22 ವರ್ಷಗಳಿಂದ ವಿಶೇಷವಾಗಿ ಗಣೇಶೋತ್ಸವ ಆಚರಿಸುವ ಮೂಲಕ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುತ್ತಿರುವುದು ಶ್ಲಾನೀಯ ಎಂದರು. ಜಿಎನ್ಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎನ್.ಚಂದ್ರಶೇಖರ್ ಮಾತನಾಡಿ, ಬೈಪಾಸ್ ಗಣೇಶೋತ್ಸವ ಸಮಿತಿ ಗಣೇಶೋತ್ಸವ ರಾಜ್ಯದಲ್ಲಿ ಮನೆ ಮಾತಾಗಿದೆ. ಈ ಬಾರಿ ಗಂಗಾ ನದಿ ಮಣ್ಣನ್ನು ತಂದು ಸ್ಥಳದಲ್ಲೇ ಪ್ರಣವ ರುದ್ರ ಗಣೇಶ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸುವ ಜತೆಗೆ ಬದರಿನಾಥ, ಅಯೋಧ್ಯೆ, ಕೇದಾರನಾಥ ಇನ್ನಿತರ ದೇವಾಲಯಗಳ ಪ್ರತಿ ರೂಪ ಸ್ಥಾಪಿಸಿರುವುದರಿಂದ ಜನರ ಆಕರ್ಷಣೆಗೆ ಕಾರಣವಾಗಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ, ಆ.27ರಿಂದ 19 ದಿನಗಳ ಕಾಲ ಉತ್ಸವ ನಡೆಯಲಿದೆ. ಪ್ರತಿ ದಿನ ಹೋಮ ಹವನ, ದೇವತಾ ಕಾರ್ಯಗಳು ನೆರವೇರಲಿವೆ. ಸಂಜೆ ಮನರಂಜನಾ ಕಾರ್ಯಕ್ರಮ ನಡೆಯಲಿವೆ ಎಂದರು.
ಜೀ ಕನ್ನಡದ ಸರಿಗಮಪ ತಂಡ ನೆರೆದಿದ್ದ ಸಭಿಕರಿಗೆ ಸಂಗೀತದ ರಸದೌತಣ ಉಣಬಡಿಸಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಮುಖಂಡರಾದ ಗಂಗಸಂದ್ರ ಪಟೇಲಾ, ನಾಗಾರ್ಜುನ, ಡೆಲ್ಲಿ ಸಂದೀಪ್,
ಕಿರಣ್ ಗೌಡ, ಶ್ರೀನಿವಾಸ್ ಗೌಡ ಇದ್ದರು.