ಮಂಗಳೂರು: ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಉದ್ದೇಶ ಮತ್ತು ಗುರಿ ಇಟ್ಟುಕೊಳ್ಳಬೇಕು. ನಿರಂತರ ಓದು ಮತ್ತು ಕಠಿಣ ಪರಿಶ್ರಮದೊಂದಿಗೆ ಪ್ರಯತ್ನಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್ ಹೊಸಮನಿ ಹೇಳಿದರು.
ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ, ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಎಂಬ ವಿಷಯದ ಕುರಿತಾದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ್ದು ದೇಶಕ್ಕೆ ಮಾದರಿಯಾದ ಡಿಜಿಟಲ್ ಲೈಬ್ರರಿ ವ್ಯವಸ್ಥೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಯಶಸ್ಸು ಪಡೆಯಲು ಪ್ರಚಲಿತ ವಿದ್ಯಾಮಾನಗಳ ಅರಿವು ಬಹಳಷ್ಟು ಅಗತ್ಯವಾಗಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟಸಾಧ್ಯ, ನಿರಂತರ ಓದು ಅಗತ್ಯ. ಸಾರ್ವಜನಿಕ ಗ್ರಂಥಾಲಯವು ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಪರೀಕ್ಷಾ ತಯಾರಿಗಳನ್ನು ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ.ವಿ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾದ ಗಾಯತ್ರಿ, ಕಾಲೇಜಿನ ಸ್ನಾತಕ ವಿಭಾಗದ ಸಂಯೋಜಕರಾದ ಪ್ರೊ. ವಸಂತಿ ಪಿ, ಗ್ರಂಥಪಾಲಕರಾದ ಉಮಾ, ಡಾ. ರವಿಚಂದ್ರ ನಾಯ್ಕ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕರಾಗಿರುವ ಡಾ. ಮಾಲತಿ ಕೆ, ಐ.ಕ್ಯೂ.ಎ.ಸಿಯ ಸಹ ಸಂಚಾಲಕರಾದ ಡಾ. ಜ್ಯೋತಿಪ್ರಿಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಕೃಷ್ಣ ಮತ್ತು ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಜ್ವಲ ಅಕಾಡೆಮಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಕೆ.ಯು ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಹಾಗೂ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಾಣಿಶ್ರೀ ಮತ್ತು ಕು. ಶ್ರಾವ್ಯ ಪ್ರಾರ್ಥಿಸಿದರು. ರಂಜಿತ ಸ್ವಾಗತಿಸಿದರು, ಮೇಘ ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
---------------
ಪುಸ್ತಕದ ಜತೆ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಸ್ಫರ್ಧಾತ್ಮಕ ಪರೀಕ್ಷೆಗೆ ಪೂರ್ವ ಸಿದ್ದತೆ ನಡೆಸಿದಂತೆ. ವಿದ್ಯಾರ್ಥಿಗಳು ತಮ್ಮ ಸಮೀಪದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪುಸ್ತಕ ಹಾಗೂ ಕರ್ನಾಟಕ ಡಿಜಿಟಲ್ ಗ್ರಂಥಾಲಯಗಳ ಸಮರ್ಪಕ ಬಳಕೆ ಮಾಡಿಕೊಂಡರೆ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲು ಸುಲಭವಾಗಲಿದೆ.
ಡಾ. ಸತೀಶ್ ಕುಮಾರ್ ಎಸ್ ಹೊಸಮನಿ, ನಿರ್ದೇಶಕ
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು