ಹನೂರು: ಕಳೆದ 2 ದಿನಗಳಿಂದ ಸುರಿದ ಮಳೆಗೆ ತಾಲೂಕಿನ ಗುಂಡಾಪುರ-ಮಣಗಳ್ಳಿ ಮಾರ್ಗದ ರಸ್ತೆಯು ಕೆಸರುಮಯವಾಗಿದ್ದು, ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗುಂಡಾಪುರ ಗ್ರಾಮದ ಮೂಲಕ ಎಡಹಳ್ಳಿ ದೊಡ್ಡಿ, ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಸುಮಾರು 8 ಕಿ.ಮೀ ಅಂತರವನ್ನು ಹೊಂದಿದ್ದು, ದಶಕದ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಆದರೆ ಕಳೆದ ಮೂರ‌್ನಾಲ್ಕು ವರ್ಷದಿಂದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಮಳೆ ಬಂದ ವೇಳೆ ಹಲವು ದಿನಗಳವರೆಗೆ ನೀರು ನಿಲ್ಲುತ್ತದೆ. ಜಲ್ಲಿಕಲ್ಲುಗಳು ಅಲ್ಲಲ್ಲಿ ಹರಡಿವೆ. ಇದರಿಂದ ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ. ಗುಂಡಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ರಾತ್ರಿ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವಭಯ ಎದುರಾಗಿದೆ.
ಕಳೆದ 2 ದಿನಗಳಿಂದ ಸುರಿದ ಮಳೆಗೆ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿರುವುದು ಒಂದೆಡೆಯಾದರೆ, ಗುಂಡಾಪುರದ ಬಳಿ ರಸ್ತೆಯು ಕೆಸರುಮಯವಾಗಿದೆ. ಇದರಿಂದ ಸಂಚಾರಕ್ಕೆ ತೊಡುಕಾಗಿ ಪರಿಣಮಿಸಿದ್ದು, ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಗುಂಡಾಪುರ ಗ್ರಾಮದ ಮಾದೇಶ್ ಒತ್ತಾಯಿಸಿದ್ದಾರೆ.