ಕೆ.ಎಂ.ದೊಡ್ಡಿ : ಅಪರಾಧಗಳ ತಡೆ ಕೇವಲ ಪೊಲೀಸರಿಂದ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಮಂಗಳವಾರ ಸಮೀಪದ ಕಾಡುಕೊತ್ತನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಅಪರಾಧ ತಡೆ ಮಾಸಚಾರಣೆ ಅಂಗವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅಪರಾಧ ಪ್ರಕರಣಗಳ ಕಡಿವಾಣ ಕುರಿತು ಬೀಟ್ ಪೊಲೀಸ್ ಸಿಬ್ಬಂದಿ ಆಯೋಜಿಸಿದ್ದ ಅರಿವು ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಅಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದರು.
ಅಪರಾಧ ಕೃತ್ಯಗಳು ನಡೆಯದಂತೆ ಪೊಲೀಸರ ಜತೆ ಸಾರ್ವಜನಿಕರು ಕೈಗೂಡಿಸದರೆ ಮಾತ್ರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಸಾಧ್ಯವಾದ ಮಟ್ಟಿಗೆ ಹೆಚ್ಚಿನ ಆಭರಣ ಮತ್ತು ನಗದು ಹಣವನ್ನು ಮನೆಯಲ್ಲಿ ಇಡದೆ ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವ ಬಗ್ಗೆ ವ್ಯವಸ್ಥೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಒಂಟಿಯಾಗಿ ಮಹಿಳೆಯರು ಹೋಗುವುದನ್ನು ನಿಲ್ಲಿಸಿ, ಇಲ್ಲವಾದರೆ, ಸರಗಳ್ಳತನ ಇಲ್ಲವೇ ಸುಲಿಗೆ ನಡೆಯಬಹುದು. ನೀವು ಆಟೋರಿಕ್ಷಾ ಅಥವಾ ಟ್ಯಾಕಿಯಲ್ಲಿ ತೆರಳುವಾಗ ಅಪರಿಚಿತ ವ್ಯಕ್ತಿಯನ್ನು ವಾಹನದಲ್ಲಿ ಕೂರಿಸಲು ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.
ಅಪರಿಚಿತ ವ್ಯಕ್ತಿಗಳು ನಿರ್ಜನ ರಸ್ತೆಯಲ್ಲಿ ಅನವಶ್ಯಕವಾಗಿ ಸುತ್ತಾಡುತ್ತಿದ್ದರೆ ಅಂಥಹವರ ಬಗ್ಗೆ ಜಾಗರೂಕರಾಗಿ, ಸಾಧ್ಯವಾದರೆ ಆ ವಾಹನದ ನೋಂದಣಿ ಸಂಖ್ಯೆಯನ್ನು ಬರೆದುಕೊಂಡು ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವುದು ಸೂಕ್ತ ಎಂದು ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ, ದ್ವಿಚಕ್ರ ವಾಹನ ಚಲಾಯಿಸುವಾಗ ಸವಾರರು ತಪ್ಪದೆ ಹೆಲ್ಮೆಟ್ ಧರಿಸಿ, ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳುವ ಜತೆಗೆ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ದೂರವಾಣಿ ಅಥವಾ ಇ- ಮೇಲ್ ಮೂಲಕ ಯಾರಾದರೂ ತಾವು ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಪಿನ್ ನಂಬರ್ ಕೇಳಿದರೆ ಯಾರಿಗೂ ತಿಳಿಸಬಾರದು. ಸುರಕ್ಷತಾ ದೃಷ್ಟಿಯಿಂದ ಫೇಸ್‌ಬುಕ್ ಮತ್ತು ಇ-ಮೇಲ್ ಪಾಸ್‌ವರ್ಡ್‌ಗಳನ್ನು ಆಗಿಂದಾಗ್ಗೆ ಬದಲಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ವಕೀಲ ಶ್ರೀಕಂಠಸ್ವಾಮಿ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷಿತಾ, ಗ್ರಾ.ಪಂ. ಪಿಡಿಒ ಅಶ್ವಿನಿ, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಪ್ರಸನ್ನ, ಬೀಟ್ ಪೊಲೀಸ್ ಸಿಬ್ಬಂದಿ ಆರ್. ಪ್ರಭುಸ್ವಾಮಿ, ವಿ.ಸುಬ್ರಮಣ್ಯ, ಗುತ್ತಿಗೆದಾರ ಕೆ.ಸಿ. ಮಹದೇವು, ಕೆ.ಕೆ. ಹಳ್ಳಿ ನಂದೀಶ್, ಚಿದಂಬರ ಮೂರ್ತಿ ಸೇರಿದಂತೆ ಹಲವರಿದ್ದರು.