ಜಿಲ್ಲೆ

ಪ್ರಾಧಿಕಾರದಲ್ಲಿ ಹಿರಿಯ ನಾಗರಿಕರ ಅಹವಾಲು ಸ್ವೀಕಾರ ದಿನ ನಿಗದಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಕೃಷಿ ಭೂಮಿ ಕನ್ವರ್ಷನ್​ ಸಹಿತ ಮೊದಲಾದ ದಾಖಲೆ ಪ್ರಕ್ರಿಯೆಗಳಿಗೆ ಸಂಬಂಧಿಸಿ ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಪ್ರತಿವಾರ ಹಿರಿಯ ನಾಗರಿಕರ ಅಹವಾಲು ಸ್ವೀಕಾರಕ್ಕೆ ದಿನ ನಿಗದಿಪಡಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.

ಶನಿವಾರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಅಂಬಾಗಿಲು&ಪೆರಂಪಳ್ಳಿ ರಸ್ತೆಯ ಅಗಲೀಕರಣ ಸಂತ್ರಸ್ತರಿಗೆ ಟಿಡಿಆರ್​ ಪ್ರಮಾಣ ಪತ್ರ ಪಡೆಯಲು ಕಚೇರಿಗೆ ಸಾಕಷ್ಟು ಭಾರಿ ಅಲೆದಾಡಲಾಗುತ್ತಿದೆ. ಆದರೂ ಈ ಬಗ್ಗೆ ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ನಾಗರಿಕರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಾಧಿಕಾರದಲ್ಲಿ ಖಾಯಂ ಅಧಿಕಾರಿ, ಸಿಬಂದಿ ನೇಮಕ ಮಾಡಲು ನಗರಾಭಿವೃದ್ಧಿ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಸೋಮವಾರ ಭೇಟಿ ಮಾಡಲಾಗುವುದು. ಪ್ರಾಧಿಕಾರದಲ್ಲಿ ಕೆಲಸಗಳು ವ್ಯವಸ್ಥಿತವಾಗಿ ನಡೆಯಲು ಅಧಿಕಾರಿ, ಸಿಬಂದಿ ವರ್ಗ ಜನಪರ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಭೇಟಿಗೆ ಕಡ್ಡಾಯವಾಗಿ ದಿನ ನಿಗದಿ ಮಾಡಬೇಕು ಎಂದು ಸಲಹೆ ನೀಡಿದರು. 20ಕ್ಕೂ ಅಧಿಕ ಸಾರ್ವಜನಿಕರಿಂದ ವಿವಿಧ ಅಹವಾಲು ಸಲ್ಲಿಕೆಯಾದವು. ಪ್ರಾಧಿಕಾರದ ಆಯುಕ್ತ ಮಹೇಶ್ಚಂದ್ರ, ಯೋಜನಾ ಸದಸ್ಯೆ ರಮ್ಯಾ, ನಗರ ಯೋಜಕ ಫೈರೋಜ್​ ಮೊದಲಾದವರು ಉಪಸ್ಥಿತರಿದ್ದರು.