ದೇವದುರ್ಗ: ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನ ಜಾಗ ಅತಿಕ್ರಮ, ಅನೈತಿಕ ಚಟುವಟಿಕೆ ಕುರಿತು ಸಾರ್ವಜನಿಕ ಕ್ಲಬ್ ಹೋರಾಟ ಸಮಿತಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪುರಸಭೆಯಿಂದ ಬುಧವಾರ ಸರ್ವೇ ಕಾರ್ಯ ಕೈಗೊಳ್ಳಲಾಯಿತು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ ನಾಯಕ ಮಾತನಾಡಿ, ಸಾರ್ವಜನಿಕ ಕ್ಲಬ್ ಮೈದಾನ ತಾಲೂಕಿನ ಕೇಂದ್ರಬಿಂದುವಾಗಿದೆ. ಐತಿಹಾಸಿಕ ಸ್ಥಳವಾಗಿದ್ದು ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳು ಸೇರಿ ಗಣ್ಯರು ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈಗ ಪುರಸಭೆ ನಿರ್ಲಕ್ಷ್ಯದಿಂದ ಮೈದಾನ ಹಾಳಾಗುತ್ತಿದೆ. ಹಲವು ಕಡೆ ಅತಿಕ್ರಮ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಕಾಂಪೌಂಡ್‌ಬಿದ್ದು ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ಪುರಸಭೆ ಬಜೆಟ್‌ನಲ್ಲಿ ವಿಶೇಷ ಅನುದಾನ ಕಾಯ್ದಿರಿಸುವಂತೆ ಮನವಿ ಮಾಡಿದರು.
ಪುರಸಭೆ ಸಹಾಯಕ ಇಂಜಿನಿಯರ್ ಗಂಗಾಧರ್ ಮಾತನಾಡಿ, ಮೇಲಧಿಕಾರಿಗಳ ಸೂಚನೆ ಮೇರೆಗೆ ಮೈದಾನದ ಅಳತೆ ಮಾಡಲಾಗಿದೆ. ಇದರ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಮುಖ್ಯಾಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದರು. ಮುಖ್ಯಾಧಿಕಾರಿ ಕೆ.ಹಂಪಯ್ಯ, ಹೋರಾಟ ಸಮಿತಿ ಸಂಚಾಲಕರಾದ ತಾಯಪ್ಪ ಗೋಸಲ್, ಮಹಿಬೂಬ್ ಹಟ್ಟಿ ಇತರರಿದ್ದರು.