ಬೆಂಗಳೂರು ಗ್ರಾಮಾಂತರ: ಹಾಡಹಗಲೇ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗಲು ಯತ್ನಸಿದವರನ್ನು ಬೈಕ್ನಲ್ಲಿ ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ ಸಿನಿಮೀಯ ಘಟನೆ ಇಂದು ನಡೆದಿದೆ.
ನಾಲ್ವರು ಎರಡು ಬೈಕ್ನಲ್ಲಿ ಬಂದು ಹಾಡಹಗಲೇ ಚಾಕು ತೋರಿಸಿ, 4 ಸಾವಿರ ರೂಪಾಯಿ ದರೋಡೆ ಮಾಡಿಕೊಂಡು ಪರಾರಿ ಆಗಲು ಯತ್ನಿಸಿದ್ದಾರೆ. ಆಗ ಸಾರ್ವಜನಿಕರು ಅವರನ್ನು ಬೈಕ್ನಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ದರೋಡೆಕೋರರನ್ನು ಹಿಡಿದು ಥಳಿಸಿ, ಕಂಬಕ್ಕೆ ಕಟ್ಟಿ ಹಾಕಿದ ಜನರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಅಂದು ಸರ್ಕಾರಿ ಕಚೇರಿಯಲ್ಲಿ ತಲವಾರ್ ಬೀಸಿ ಬೆದರಿಸಿದ್ದ; ಇಂದು ಬದುಕಿಗೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ..
ರೈಲ್ವೇ ಸ್ಟೇಷನ್ ವೃತ್ತದಿಂದ ರಂಗಪ್ಪ ಸರ್ಕಲ್ ವರೆಗೆ ಒಂದು ಕಿಲೋಮೀಟರ್ ದೂರ ಚೇಸ್ ಮಾಡಿ ಹಿಡಿದ ಸಾರ್ವಜನಿಕರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಬಳಿಕವೂ ಪರಾರಿಗೆ ಯತ್ನಿಸಿದ ಒಬ್ಬ ಒಂಟಿ ಮನೆಗೆ ನುಗ್ಗಿ ಅವಿತುಕೊಂಡಿದ್ದ. ಆತನನ್ನು ಪೊಲೀಸರು ಹಿಡಿದು ವಶಕ್ಕೆ ಪಡೆದಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.