ನಂಜನಗೂಡು: ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಸಂವಿಧಾನದ ಆಶಯಗಳು ಮತ್ತು ಬಹುತ್ವದ ಭಾರತಕ್ಕಿರುವ ಸವಾಲುಗಳು ಜನಜಾಗೃತಿ, ಸಮಾವೇಶವನ್ನು ಪಟ್ಟಣದಲ್ಲಿ ಜೂ.27ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಉಪವಿಭಾಗೀಯ ಸಂಚಾಲಕ ಮಂಜು ಶಂಕರಪುರ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆಸ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಅಂದು ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಸಮಾವೇಶವನ್ನು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಉದ್ಘಾಟಿಸಲಿದ್ದಾರೆ. ಭಾವಚಿತ್ರಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮುಖ್ಯಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಸಂಘಟನಾ ಸಂಚಾಲಕ ಸುರೇಶ್, ನಟರಾಜು, ಕೃಷ್ಣಮೂರ್ತಿ, ಹೊಳೆಯಪ್ಪ, ಗಜೇಂದ್ರ, ಸಿದ್ದರಾಜು ಇತರರು ಇದ್ದರು.