ಜಿಲ್ಲೆ

ಸೆ.೩೦ ರಂದು ಜನಜಾಗೃತಿ ಕಾರ್ಯಕ್ರಮ

ಆದರ್ಶ್. ಎಂ.ಕೆ.

ಮಡಿಕೇರಿ: ರಾಜ್ಯ ಸರ್ಕಾರದ ಜಾತಿವಾರು ಗಣತಿಯ ಎಲ್ಲಾ ಮೂರು ಕಾಲಂಗಳಲ್ಲಿ ಕೊಡವ ಎಂದು ನಮೂದಿಸಬೇಕು ಸೇರಿದಂತೆ ವಿವಿಧ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲು ಮತ್ತು ಸರಕಾರದ ಗಮನ ಸೆಳೆಯಲು ಸೆ.೩೦ ರಂದು ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೧೪ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ವರ್ಗೀಕರಣವು ೨೦೨೬ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ(ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು. ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಲಾಗುವುದು ಮತ್ತು ರಾಜ್ಯ ಸರ್ಕಾರದ ವತಿಯಿಂದ ಅ.೭ರ ವರೆಗೆ ೧೫ ದಿನಗಳ ಕಾಲ ನಡೆಯಲಿರುವ ಜಾತಿವಾರು ಗಣತಿಯ ಎಲ್ಲಾ ಮೂರು ಕಾಲಂಗಳಲ್ಲಿ ಕೊಡವ ಎಂದೇ ನಮೂದಿಸಬೇಕು ಎಂದು ಮಾನವ ಸರಪಳಿ ಸಂದರ್ಭ ಕರೆ ನೀಡಲಾಗುವುದೆಂದು ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ ೧೦.೩೦ ಗಂಟೆಗೆ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಸೇರಿದಂತೆ ಕೊಡವರ ಎಲ್ಲಾ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದು. ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ವಿವರಿಸಲಾಗುವುದು. ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ಕೊಡವ ಸಮುದಾಯದ ಹಕ್ಕೊತ್ತಾಯಗಳನ್ನು ಮಂಡಿಸಲು ಮತ್ತು ಜನಜಾಗೃತಿ ಮೂಡಿಸಲು ಮಾನವ ಸರಪಳಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲಿದೆ. ಬೇಂಗ್ ನಾಡಿನ ಚೇರಂಬಾಣೆಯ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.