ಜಿಲ್ಲೆ

ದುಶ್ಚಟದಿಂದ ಹೊರತರುವುದು ಸಮಾಜದ ಜವಾಬ್ದಾರಿ: ಜಿಲ್ಲಾಧಿಕಾರಿ

ಉಡುಪಿ: ದುಶ್ಚಟಗಳಿಗೆ ಬಲಿಯಾದವರನ್ನು ಅದರಿಂದ ಹೊರತರುವುದು ಸಮಾಜದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರಗಳು ಬಹಳ ಮುಖ್ಯ ಕೆಲಸ ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆ, ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಹಾಗೂ ಕೃಷ್ಣಮಠ, ಪರ್ಯಾಯ ಶ್ರೀ ಕೃಷ್ಣ್ಣಾಪುರ ಮಠ ಆಶ್ರಯದಲ್ಲಿ ರಾಜಾಂಗಣದಲ್ಲಿ ಆಯೋಜಿಸಲಾದ "ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿಮಾರ್ಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು.

ದುಶ್ಚಟಗಳಿಗೆ ಒಳಗಾದವರಿಗೆ ವೈದ್ಯರ ಮೂಲಕ ಕೌನ್ಸಿಲಿಂಗ್​ ನೀಡಬೇಕು. ಮನೆಮಂದಿ ಮರ್ಯಾದೆಗೆ ಅಂಜಿ ದುರಾಭ್ಯಾಸ ಮುಚ್ಚಿಡುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿ, ವ್ಯಸನಗಳನ್ನು ಪ್ರಾರಂಭಿಸುವುದು ಸುಲಭ. ಅದರೆ ಬಿಡುವುದು ಕಷ್ಟ. ಸಂಬಂಧಗಳ ಶಿಥಿಲತೆಗಳಿಂದ ಯುವ ಜನರು ದುಶ್ಚಟಗಳ ದಾಸ್ಯರಾಗುತ್ತಿದ್ದಾರೆ. ಪ್ರತಿಯೊಬ್ಬರೂ ಮಾನವ ಜನ್ಮದ ಮಹತ್ವ ತಿಳಿದುಕೊಂಡು ಗೌರಯುತ ಬದುಕು ಕಟ್ಟಿಕೊಳ್ಳಬೇಕು ಎಂದರು.

ಪರ್ಯಾಯ ಶ್ರೀ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್​ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ತಂಡದ ಸದಸ್ಯರಾದ ವಿನಯ್​ ಕುಕ್ಕೆಹಳ್ಳಿ, ರಾಜು ಪಾಣಾರ ಮತ್ತು ಮಠಜುನಾಥ್​ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸುಂದರ್​ ಮೆಂಡನ್​ ಹಿರಿಯಡ್ಕ ಮತ್ತು ಸೀಮಾ ರಾಜು ಪಾಣಾರ ಪಾನಮುಕ್ತ ಜೀವನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಈ ಶ್ರಮ್​ ಕಾರ್ಡ್​ವಿತರಿಸಿದರು. ಜನ ಜಾಗೃತಿ ವೇದಿಕೆಯ ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರಕಾಶ್​ ಶೆಟ್ಟಿ ಹಕ್ಕೊತ್ತಾಯವನ್ನು ಸಭೆಯಲ್ಲಿ ಮಂಡಿಸಿದರು. ಉಡುಪಿ ಶಾಸಕ ಯಶ್ಪಾಲ್​ ಎ. ಸುವರ್ಣ ಮನವಿಯನ್ನು ಸ್ವೀಕರಿಸಿದರು.

ಉಡುಪಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್​ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿಕಟಪೂರ್ವ ರಾಜ್ಯಾಧ್ಯಕ್ಷ ದೇವದಾಸ್​ ಹೆಬ್ಬಾರ್​, ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ನವೀನ್​ ಚಂದ್ರ ಶೆಟ್ಟಿ, ಉಡುಪಿ ವಿಭಾಗ ಸೂಕ್ಷ್ಮ ವಿಮಾ ವಿಭಾಗ ಪ್ರಬಂಧಕ ದಿನೇಶ್​ ಪ್ರಭು, ಬ್ರಹ್ಮಾವರ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಪ್ರಕಾಶ್​ ಶೆಟ್ಟಿ, ನಗರಸಭಾ ಸದಸ್ಯೆ ಮಾನಸ ಸಿ. ಪೈ, ಉಡುಪಿ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯೆ ಶಮಿತಾ ಪಿ. ಶೆಟ್ಟಿ , ಜನ ಜಾಗೃತಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್​ ಅಂಬಲಪಾಡಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್​. ವಂದಿಸಿದರು. ಜನ ಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್​ ಆಚಾರ್ಯ ಮತ್ತು ವಲಯ ಮೇಲ್ವಿಚಾರಕ ರವೀಂದ್ರ ಎಸ್​. ಕಾರ್ಯಕ್ರಮ ನಿರೂಪಿಸಿದರು.