ಬ್ಯಾಡಗಿ: ಬೆಂಗಳೂರಿನಲ್ಲಿ ಆಯೋಜಿಸಿದ ಐಪಿಎಲ್ ಆರ್ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಪ್ರಾಣತೆತ್ತ 11 ಜನ ಅಮಾಯಕರ ಸಾವಿಗೆ ಕಾರಣರಾದ ಮುಖ್ಯಮಂತ್ರಿಗಳು ಘಟನೆಯ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.
ಪಟ್ಟಣದ ಹಳೇ ಪುರಸಭೆ ಕಚೇರಿ ಎದುರು ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಎರಡು ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಎನ್ನುವ ಪ್ರಚಾರಗೈಯುತ್ತಿರುವ ಸರ್ಕಾರ ರಾಜ್ಯದ ಜನತೆಗೆ ದಿಕ್ಕು ತಪ್ಪಿಸುವ ಯತ್ನ ನಡೆಸಿದೆ. ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನೆಪದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜನರಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಮಂತ್ರಿಗಳು, ಶಾಸಕರು, ಅಧಿಕಾರಿಗಳು ಹಗರಣಗಳಲ್ಲಿ ಸಿಲುಕಿದ್ದಾರೆ. ಈ ಕುರಿತು ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಆರ್ಸಿಬಿ ವಿಜಯೋತ್ಸವಕ್ಕೆ ಕಾಯ್ದೆಗಳ ಉಲ್ಲಂಘನೆ ಹಾಗೂ ಪೊಲೀಸ್ ಇಲಾಖೆ ನಿಯಮ ಪಾಲಿಸದ ಸರ್ಕಾರದ ಎಡವಟ್ಟಿನಿಂದ 11 ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈತೊಳೆದುಕೊಂಡಿದೆ. ಈ ಕುರಿತು ಸಮಗ್ರ ತನಿಖೆ ನಡೆಸದೆ, ಒಬ್ಬೊಬ್ಬರು ಒಂದೊಂದು ಹೇಳಿಕೆ ಮೂಲಕ ವೈಫಲ್ಯ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ. ಅಮಾಯಕರ ಸಾವಿಗೆ ಕಾರಣರಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ವಂತೆ ಒತ್ತಾಯಿಸಿದರು.
ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯ ಬಸವರಾಜ ಛತ್ರದ, ಸ್ಥಾಯಿ ಸಮಿತಿ ಚೇರ್ಮನ್ ಚಂದ್ರಪ್ಪ ಶೆಟ್ಟರ್, ಸದಸ್ಯ ವಿನಯಕುಮಾರ ಹಿರೇಮಠ, ಸರೋಜಾ ಹಿರೇಮಠ, ಗಾಯತ್ರಿ ರಾಯ್ಕರ, ವಿದ್ಯಾಶೆಟ್ಟಿ, ಶಂಕ್ರಗೌಡ್ರ ಪಾಟೀಲ, ವಕೀಲ ನಿಂಗಪ್ಪ ಬಟ್ಟಲಕಟ್ಟೆ, ವೀರೇಂದ್ರ ಶೆಟ್ಟರ್, ವಿಜಯಭರತ ಬಳ್ಳಾರಿ, ಸುರೇಶ ಉದ್ಯೋಗಣ್ಣನವರ ಇತರರಿದ್ದರು.