ಜಿಲ್ಲೆ

ಶಿವಮೊಗ್ಗದಲ್ಲಿ ಪಿಯು ವಿದ್ಯಾರ್ಥಿ ರೈಲಿಗೆ ಸಿಲುಕಿ ಸಾವು, ಆತ್ಮಹತ್ಯೆ ಶಂಕೆ

Shivamogga

ಶಿವಮೊಗ್ಗ: ನಗರದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ರೈಲ್ವೆ ಬ್ರಿಡ್ ಹತ್ತಿರ ರೈಲಿಗೆ ಸಿಲುಕು ಪ್ರಥಮ ಪಿಯು ವಿದ್ಯಾರ್ಥಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಹೊಸಮನೆಯ 6ನೇ ಕ್ರಾಸ್‌ನ ವಿಶ್ವಾಸ್ (17) ಮೃತ ವಿದ್ಯಾರ್ಥಿ. ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ವಿಶ್ವಾಸ್ ಹೊಸಮನೆ ಬಡಾವಣೆಯಲ್ಲಿ ತಂದೆ-ತಾಯಿ ಜತೆ ವಾಸವಾಗಿದ್ದ. ಬುಧವಾರದಿಂದಲೇ ಈತ ನಾಪತ್ತೆಯಾಗಿದ್ದು ಗುರುವಾರ ಬೆಳಗ್ಗೆ ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆಯಾಗಿದೆ.

ವಿಶ್ವಾಸ್‌ಗೆ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದ್ದವು. ಇದರಿಂದ ಆತ ತೀವ್ರವಾಗಿ ನೊಂದಿದ್ದು ಖಿನ್ನತೆಗೆ ಒಳಗಾಗಿದ್ದ. ಪಾಲಕರು ಸಮಾಧಾನ ಹೇಳಿದ್ದರು. ಈತ ಬುಧವಾರ ರಾತ್ರಿಯೇ ಇನ್‌ಸ್ಟಾಗ್ರಾಂ ಸ್ಟೇಟಸ್ ಮತ್ತು ಸ್ನೇಹಿತರ ವಾಟ್ಸ್‌ಆ್ಯಪ್ ನಂಬರ್‌ಗಳಿಗೆ ಇದು ನನ್ನ ಕಡೆಯ ಸಂದೇಶ ಎಂದು ಮೆಸೇಜ್ ಹಾಕಿದ್ದ.

ಶಿವಮೊಗ್ಗ-ತಾಳಗುಪ್ಪ ನಡುವಿನ ರೈಲು ಡಿಕ್ಕಿಯಾಗಿರುವ ಸಾಧ್ಯತೆ ಇದ್ದು ಶಿವಮೊಗ್ಗ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವಾಸ್ ಸಾವಿನ ಹಿನ್ನಲೆಯಲ್ಲಿ ಗುರುವಾರ ಕಾಲೇಜಿಗೆ ರಜೆ ಘೋಷಿಸಲಾಗಿತ್ತು.