ಜಿಲ್ಲೆ

ಸೆ.1ರಿಂದ ದ್ವಿತೀಯ ಪಿಯು ಭೌತಿಕ ತರಗತಿ

Dakshina Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟಂಬರ್ ಒಂದರಿಂದ ದ್ವಿತೀಯ ಪಿಯು ಕಾಲೇಜು ಭೌತಿಕ ತರಗತಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ಉದ್ದೇಶದಿಂದ ಜಿಲ್ಲಾಡಳಿತ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಭೌತಿಕ ತರಗತಿ ಹಾಗೂ ವಸತಿ ಶಾಲೆಗೆ ವಿದ್ಯಾರ್ಥಿಗಳನ್ನು ಸೇರ್ಪಡೆಗೆ ಮೊದಲು ಅವರ ಪಾಲಕರಿಂದ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು.

ವಸತಿ ಶಾಲೆಯ ಕೇರಳದ ವಿದ್ಯಾರ್ಥಿಗಳನ್ನು ಅಲ್ಲಿಂದ ಆಗಮಿಸಿದ ಬಳಿಕ 7 ದಿನ ಕ್ವಾರಂಟೈನ್‌ನಲ್ಲಿರಿಸಲು ಹಾಗೂ ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಒದಗಿಸಲು ವಸತಿ ಕಾಲೇಜುಗಳಲ್ಲಿಯೇ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಒದಗಿಸುವುದು ಕಡ್ಡಾಯ. 7 ದಿನ ಕ್ವಾರಂಟೈನ್ ಅವಧಿ ಪೂರ್ಣಗೊಂಡ ವಿದ್ಯಾರ್ಥಿಗಳು ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು, ನೆಗೆಟಿವ್ ಪ್ರಮಾಣಪತ್ರದೊಂದಿಗೆ ತರಗತಿಗೆ ಹಾಜರಾಗುವುದು. ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್‌ನಿಂದಲೇ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಬೇಕು. ಕೇರಳದಿಂದ ದಿನಂಪ್ರತಿ ಬರುವ ವಿದ್ಯಾರ್ಥಿಗಳು 7 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣಪತ್ರದೊಂದಿಗೆ ತರಗತಿಗೆ ಹಾಜರಾಗಬೇಕು. ಈ ನಿಯಮ ಕೇರಳದಿಂದ ದಿನಂಪ್ರತಿ ಆಗಮಿಸುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೂ ಅನ್ವಯ.

ಕಾಲೇಜಿನ ಇತರ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಆರಂಭದಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಪೂರ್ಣ ಜವಾಬ್ದಾರಿಯನ್ನು ಸಂಬಂಧಿಸಿದ ಪ್ರಾಂಶುಪಾಲರಿಗೆ ವಹಿಸಲಾಗಿದೆ. ವಸತಿ ನಿಲಯ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಬೇಕು. ಮಾರ್ಗಸೂಚಿ ಪಾಲನೆಯಾಗುತ್ತಿದೆಯೇ ಎನ್ನುವ ಬಗ್ಗೆ ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಮಗ್ರ ಮೇಲ್ವಿಚಾರಣೆ ನಡೆಸಲಿದ್ದಾರೆ.

ಶೇ.50 ವಿದ್ಯಾರ್ಥಿಗಳು: ವಾರದ ಮೊದಲ ಮೂರು ದಿನಗಳು ಶೇ.50 ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬೇಕು. ಉಳಿದ ಶೇ.50 ವಿದ್ಯಾರ್ಥಿಗಳು ಮನೆಯಲ್ಲೇ ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕು. ಪ್ರಥಮ ಅವಧಿಯಲ್ಲಿ ಆನ್‌ಲೈನ್ ತರಗತಿಗೆ ಹಾಜರಾದ ವಿದ್ಯಾರ್ಥಿಗಳು ವಾರದ ನಂತರದ ಮೂರು ದಿನಗಳಲ್ಲಿ ಭೌತಿಕ ತರಗತಿಗೆ ಹಾಜರಾಗಬೇಕು. ಪ್ರಥಮ ಅವಧಿಯಲ್ಲಿ ಭೌತಿಕ ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಈ ಸಂದರ್ಭ ಆನ್‌ಲೈನ್ ತರಗತಿಗೆ ಹಾಜರಾಗಬೇಕು. ಇದೇ ರೀತಿ ತರಗತಿಯಲ್ಲಿ ವಿದ್ಯಾರ್ಥಿಗಳ ಹಾಜರಿ ಶೇ.50 ರಷ್ಟು ಇರುವಂತೆ ನೋಡಿಕೊಳ್ಳಬೇಕು. 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ವಿಶಾಲ ಕೊಠಡಿಗಳಿದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ವಾರಪೂರ್ತಿ ಭೌತಿಕ ತರಗತಿ ನಡೆಸಬಹುದು.

ವಸತಿ ಶಾಲೆಗಳಿಗೆ ಸೂಚನೆ: ಮಾನಸಿಕವಾಗಿ ಕುಂದಿದ್ದ ವಿದ್ಯಾರ್ಥಿಗಳಿಗೆ ಕೌನ್ಸಿಲರ್ ಮೂಲಕ ಆತ್ಮಸ್ಥೈರ್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ಬಿಸಿ ನೀರು, ಬಿಸಿ ಆಹಾರ ಹಾಗೂ ಪೌಷ್ಠಿಕ ಆಹಾರ ನೀಡುವುದು ಕಡ್ಡಾಯ. ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡುಬಂದರೆ ತಕ್ಷಣ ಕೋವಿಡ್ ಕೇರ್ ಸೆಂಟರ್ ಅಥವಾ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಬೇಕು. ಪೋಷಕರು ಮತ್ತು ಹತ್ತಿರದ ವೈದ್ಯಕೀಯ ಜಿಲ್ಲಾ ಸಹಾಯವಾಣಿಗೆ ಮಾಹಿತಿ ತಿಳಿಸಬೇಕು.