ಜಿಲ್ಲೆ

ಅಂಧ-ಅನಾಥರ ಸೇವೆಗಾಗಿ ಬದುಕಿದ ಪಂ. ಪುಟ್ಟರಾಜರು

ಲಕ್ಷ್ಮೇಶ್ವರ: ಪಂ. ಪುಟ್ಟರಾಜ ಕವಿ ಗವಾಯಿಗಳವರು ಅಂಧ-ಅನಾಥರ ರಕ್ಷಣೆ, ಪೋಷಣೆ, ಕಲ್ಯಾಣಕ್ಕಾಗಿ ಬದುಕಿದವರು. ಅವರನ್ನು ಜಗತ್ತು ಸದಾ ಸ್ಮರಿಸುತ್ತದೆ ಎಂದು ನೀಲಗುಂದ ಶ್ರೀ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ಶ್ರೀಗಳು ಹೇಳಿದರು.

ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ, ಯಳವತ್ತಿಯ ಶ್ರೀ ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಹಾಗೂ ಯಳವತ್ತಿ ಗ್ರಾಮಸ್ಥರ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಂ. ಪಂಚಾಕ್ಷರಿ ಗವಾಯಿಗಳವರ ಕೃಪೆಯಿಂದ ಪುಟ್ಟರಾಜ ಕವಿ ಗವಾಯಿಗಳು ಅದ್ಭುತ ಲೋಕವನ್ನು ಸೃಷ್ಟಿಸಿದರು. ಗುರುವಿನ ನಿಷ್ಠೆ ಗಟ್ಟಿಯಾದರೆ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದಕ್ಕೆ ಪಂ. ಪುಟ್ಟರಾಜ ಕವಿ ಗವಾಯಿಗಳವರ ಗುರುನಿಷ್ಠೆ ಕಾರಣವಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಹರ್ಲಾಪುರ ಕೊಟ್ಟೂರೇಶ್ವರ ಶ್ರೀಮಠದ ಶ್ರೀ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಯಳವತ್ತಿ ಗ್ರಾಮದಲ್ಲಿ ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೋತ್ಸವ ನೆಪದಲ್ಲಿ ಆಧ್ಯಾತ್ಮಿಕ ಚಿಂತನ ನಡೆಯುತ್ತಿರುವುದು ಸ್ವಾಗತಾರ್ಹ. ನಿಸ್ವಾರ್ಥ ಸೇವೆಗೆ ಶ್ರೀ ಗಳ ಆಶೀರ್ವಾದ ಸದಾ ಇರುತ್ತದೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಸಾಕಷ್ಟು ಸಾಧನೆ ಮಾಡುವ ಮೂಲಕ ಗುರುಗಳ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದು ಹೇಳಿದರು.

ಹು-ಧಾ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಸಂತರ, ಶರಣರ ಪ್ರವಚನ ಆಲಿಸುವುದರಿಂದ ಮನಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗದುಗಿನ ಪಂ. ವೀರೇಶ ಕಿತ್ತೂರ, ಕೊಪ್ಪಳದ ಪಂ. ಸದಾಶಿವ ಪಾಟೀಲ ಹಾಗೂ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳು ಅವರಿಗೆ ಶಿವಯೋಗಿಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಗ್ರಾ.ಪಂ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಎಸ್.ಎಚ್. ಶಿವನಗೌಡ್ರ, ಮುದುಕಯ್ಯಸ್ವಾಮಿ ಹಿರೇಮಠ, ಉಮೇಶ ಹಡಪದ ಇತರರಿದ್ದರು. ಈರಣ್ಣ ಹತ್ತಿಕಾಳ ಸ್ವಾಗತಿಸಿದರು. ಹರ್ಲಾಪುರದ ಸದಾನಂದ ಶಾಸ್ತ್ರಿಗಳು ಹರ್ತಿಮಠ ನಿರೂಪಣೆ ಮಾಡಿದರು. ಸೃಷ್ಟಿ ಭರಮಗೌಡ್ರ ಅವರಿಂದ ಭರತನಾಟ್ಯ ಜರುಗಿತು. ಐದು ದಿನಗಳವರೆಗೆ ನಡೆದ ಪ್ರವಚನ ಕಾರ್ಯಕ್ರಮದ ಮಂಗಲೋತ್ಸ ಜರುಗಿತು. ಪ್ರವಚನಕಾರರಾಗಿ ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ನೆರವೇರಿಸಿದರು. ಸಿದ್ದೇಶಕುಮಾರ ತಬಲಾ ಸಾಥ್ ನೀಡಿದರು.

ಗುರುಕೃಪೆಯಿಂದ ಕ್ಷೇತ್ರ ಪಾವನ

ಅಧ್ಯಕ್ಷತೆ ವಹಿಸಿದ್ದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ‘ವೀರೇಶ್ವರ ಪುಣ್ಯಾಶ್ರಮದಲ್ಲಿ ಪ್ರತಿವರ್ಷ ಗುರುಗಳ ಪುಣ್ಯಸ್ಮರಣೋತ್ಸವ ನಡೆಯುತ್ತಿದೆ. ಅಂತೆಯೇ ಗುರುಗಳ ಜೀವನ ದರ್ಶನ ಚಿಂತನೆಗಳನ್ನು ಎಲ್ಲಿ ಹರಡುತ್ತವೆಯೋ ಆ ಕ್ಷೇತ್ರ ಪಾವನವಾಗುತ್ತದೆ’ಎಂದರು.