ಗುಳೇದಗುಡ್ಡ: ಪಂ. ಪುಟ್ಟರಾಜ ಗವಾಯಿಯವರು ತಮ್ಮ ಜೀವನವನ್ನೇ ಕಲೆ, ಸಂಗೀತಕ್ಕೆ ಮುಡುಪಾಗಿಟ್ಟವರು. ಕಣ್ಣಿನಿಂದ ಈ ಜಗತ್ತನ್ನು ನೋಡಲು ಸಾಧ್ಯವಾಗದೇ ಇದ್ದರೂ ಕಲೆ ಹಾಗೂ ಸಂಗೀತದಿಂದ ಜಗತ್ತನ್ನು ನೋಡಿದ ಮಹಾತ್ಮರು ಎಂದು ಸ್ಥಳೀಯ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಶ್ರೀಗಳು ಹೇಳಿದರು.
ಸಮೀಪದ ಹಂಸನೂರ ಗ್ರಾಮದಲ್ಲಿ ಗುರುವಾರ ರಾತ್ರಿ ಪುಟ್ಟರಾಜ ಗವಾಯಿಗಳವರ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಪಂ. ಪುಟ್ಟರಾಜ 14ನೇ ಸ್ವರಾಂಜಲಿ ಕಾರ್ಯಕ್ರಮದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಸಂಖ್ಯಾತ ಅಂಧರಿಗೆ, ಅನಾಥರ ಜೀವನಕ್ಕೆ ಬೆಳಕು ನೀಡಿದ ಮಹಾನುಭಾವರು. ಕಲಾವಿದರ ಗ್ರಾಮವಾದ ಹಂಸನೂರಿನಲ್ಲಿ ಇಂತಹ ಮಹಾನ್ ಚೇತನವನ್ನು ನೆನಪಿಸಿಕೊಂಡು ಅವರ ಸ್ವರಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಡಾ. ಶ್ರೀಕಾಂತ ಚಿಮ್ಮಲ್, ದೇವೇಂದ್ರಪ್ಪ ಬಡಿಗೇರ, ಬಸವರಾಜ ಸಿಂದಗಿಮಠ, ಬಸವರಾಜ ದಿಂಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅರಗುಂಡಿಯ ಶ್ರೀ ರಘುನಂದ ಶಾಸಿಗಳು, ರಾಘಾಪುರದ ವೇ. ಚಿದಾನಂದ ಹಿರೇಮಠ, ಪೂರ್ವಚಾರಿ ಬಡಿಗೇರ, ಮಲ್ಲಿಕಾರ್ಜುನ ವೀರಪಾಪೂರ, ಬಸವಂತಪ್ಪ ಯಲಿಗಾರ ಇದ್ದರು.