ವಿಜಯವಾಣಿ ಸುದ್ದಿಜಾಲ ಧಾರವಾಡ
ಸಿತಾರ ನವಾಜ ಉಸ್ತಾದ್ ಬಾಲೇಖಾನ ಸ್ಮರಣಾರ್ಥ ನೀಡುವ ಸಹ ಕಲಾವಿದ ಪ್ರಶಸ್ತಿಗೆ ಮುಂಬೈನ ತಬಲಾ ಕಲಾವಿದ ಪಂ. ಕಾಲೀನಾಥ ಮಿಶ್ರಾ ಆಯ್ಕೆಯಾಗಿದ್ದಾರೆ.
ಬನಾರಸ ಘರಾಣೆಯ ಪಂ. ಕಾಲೀನಾಥ ಮಿಶ್ರಾ ದೇಶದ ಸುವಿಖ್ಯಾತ ತಬಲಾ ಕಲಾವಿದ ಪಂ. ಮದನ ಮಿಶ್ರಾ ಅವರಿಂದ ಆರಂಭಿಕ ಹಂತದ ತಬಲಾ ಶಿಕ್ಷಣ ಪಡೆದ ಅವರು, ಪಂ. ಕಿಶನ್ ಮಹಾರಾಜ್ ಅವರಿಂದ ಆಳವಾದ ಅಧ್ಯಯನ ಮಾಡಿ ಪ್ರಬುದ್ಧ ತಬಲಾ ವಾದಕರಾಗಿ ಹೊರಹೊಮ್ಮಿದ್ದಾರೆ. ಇವರ ಸಾಧನೆ ಪರಿಗಣಿಸಿ ಬೆಂಗಳೂರಿನ ಸಿತಾರ ನವಾಜ್ ಉಸ್ತಾದ ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್ ಈ ವರ್ಷದ ಸಹ ಕಲಾವಿದ ಪ್ರಶಸ್ತಿ ನೀಡುತ್ತಿದ್ದಾರೆ.
ಡಿ. 7ರಂದು ಸಂಜೆ 5 ಗಂಟೆಗೆ ಸೃಜನಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಿತಾರ ರತ್ನ ಸಮಿತಿ ಅಧ್ಯಕ್ಷ ರಾವೇಂದ್ರ ಆಯಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅತಿಥಿಗಳಾಗಿ ಹಿರೇಮಗಳೂರು ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ ತೋಡ್ಕರ ಆಗಮಿಸಲಿದ್ದಾರೆ. ಸಿತಾರ ರತ್ನ ರಹಿಮತ್ ಖಾನ್ ಕುಟುಂಬದ ಕಲಾವಿದರು ಉಪಸ್ಥಿತರಿರುವರು.
ಉ. ಬಾಲೇಖಾನ ಸ್ಮರಣಾರ್ಥ ನೀಡುವ ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.