ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಗೆ ಗಣೇಶ್ ಪ್ರಸಾದ್ ಚಾಲನೆ ನೀಡಿದರು. ಎಸ್.ಎಸ್.ಮಧುಶಂಕರ್, ಪಟೇಲ್ ಸದಾಶಿವಪ್ಪ, ರವಿ, ಕುಮಾರಸ್ವಾಮಿ, ಸೋಮಶೇಖರ್, ಸೋಮನಾಯಕ ಇತರರಿದ್ದರು. 
ಜಿಲ್ಲೆ

ಕ್ರೀಡೆಯಿಂದ ಮನೋದೈಹಿಕ ಬೆಳವಣಿಗೆ

 ಗುಂಡ್ಲುಪೇಟೆ: ಯುವ ಜನತೆ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಯುವಕರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆಟದ ಮೈದಾನದ ಕೊರತೆ, ಕ್ರೀಡೆಗಳಲ್ಲಿ ಆಸಕ್ತಿ ಇಲ್ಲದಿರುವುದರಿಂದ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕ್ರೀಡೆಗಳು ವಿಶ್ವ ಮಾನ್ಯತೆ ಪಡೆದುಕೊಳ್ಳುತ್ತಿವೆ. ಸದ್ಯ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಕರಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲು ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತದಲ್ಲಿ ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲಿಯೂ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಮುಖಂಡರಾದ ಪಟೇಲ್ ಸದಾಶಿವಪ್ಪ, ರವಿ, ಕುಮಾರಸ್ವಾಮಿ, ಸೋಮಶೇಖರ್, ಸೋಮನಾಯಕ ಇತರರಿದ್ದರು.