ಪಾಂಡವಪುರ: ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಲು ನಿರಾಣಿ ಶುಗರ್ಸ್ ಸಂಸ್ಥೆ ಸತಾಯಿಸುತ್ತಿದೆ ಎಂದು ಆರೋಪಿಸಿ ಪಿಎಸ್‌ಎಸ್‌ಕೆ ನೌಕರರು ಸಿಜಿಎಂ ಸಂಜೀವ್ ಕುಮಾರ್ ಅವರಿಗೆ ಸೋಮವಾರ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆ ಆವರಣದಲ್ಲಿ ಜಮಾವಣೆಗೊಂಡ ನೌಕರರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ನೌಕರರಿಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಲು ಆಡಳಿತ ಮಂಡಳಿ ಸತಾಯಿಸುತ್ತಿದೆ ಎಂದು ದೂರಿದರು.
ಕಾರ್ಮಿಕರು ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ರಜಾ ನಗದೀಕರಣ ಮತ್ತು ಬೋನಸ್ ಹಣ ಬಂದಲ್ಲಿ ಮಕ್ಕಳ ಶಾಲಾ ದಾಖಲಾತಿಗೆ ಅನುಕೂಲವಾಗುತ್ತದೆ. ಜತೆಗೆ ಆರೋಗ್ಯ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತದೆ. ಜನವರಿಯಲ್ಲೇ ಈ ಬಗ್ಗೆ ಮನವಿ ಸಲ್ಲಿಸಿದ್ದು, ಕಾರ್ಖಾನೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನೌಕರರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಕಾರ್ಮಿಕರ ವೇತನದಲ್ಲಿ ಭವಿಷ್ಯ ನಿಧಿ ಕಟಾವು ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಖಾತೆ ನಂಬರ್ ನೀಡುತ್ತಿಲ್ಲ. ಎರಡು ದಿನದಿಂದ ನಾವು ಕಾರ್ಖಾನೆಗೆ ಬಂದಿದ್ದರೂ ಹಾಜರಿ ನೀಡಿಲ್ಲ. ಕ್ಯಾಂಟೀನ್ ಸೌಲಭ್ಯ ಕಳಪೆಯಾಗಿದೆ. ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ರೈತಸಂಘದ ಜಿಲ್ಲಾ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮತ್ತು ತಾಲೂಕು ಅಧ್ಯಕ್ಷ ಕೆನ್ನಾಳು ಪಿ.ನಾಗರಾಜು ಧಾವಿಸಿ ಸಿಜೆಎಂ ಸಂಜೀವ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕೂಡಲೇ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಕಾರ್ಖಾನೆ ಸಿಜಿಎಂ ಸಂಜೀವ್ ಕುಮಾರ್ ಮಾತನಾಡಿ, ರಜಾ ನಗದೀಕರಣ ಹಣವನ್ನು ಕಾರ್ಮಿಕರು ನಿವೃತ್ತಿಯಾದಾಗ ನೀಡಲು ಮತ್ತು ಶಾಸನ ಬದ್ಧ ಬೋನಸ್ ಹಣವನ್ನು ದೀಪಾವಳಿಯಂದು ಕೊಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಕಾರ್ಮಿಕರಲ್ಲಿ ಶಿಸ್ತಿನ ಕೊರತೆ ಇದ್ದು, ಕಾರ್ಖಾನೆಗೆ ಆಗಮಿಸಿದ ನನ್ನನ್ನು ಗೇಟ್‌ನಲ್ಲಿ ತಡೆದು ಅಶಿಸ್ತು ಪ್ರದರ್ಶಿಸಿದರು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಮೊದಲು ಆಡಳಿತ ಮಂಡಳಿ ಮತ್ತು ಉನ್ನತ ಹುದ್ದೆಯಲ್ಲಿರುವ ನೀವು ಶಿಸ್ತು ಕಲಿತು, ಕಾಲಕಾಲಕ್ಕೆ ಕಾರ್ಮಿಕರಿಗೆ ನೀಡಬೇಕಾದ ಭತ್ಯೆ ಮತ್ತಿತರ ಶಾಸನ ಬದ್ಧ ಅನುಕೂಲ ಮಾಡಿಕೊಡಿ. ಅಲ್ಲದೆ ನೌಕರರ ಬೇಡಿಕೆಗಳನ್ನು 10 ದಿನದೊಳಗೆ ಈಡೇರಿಸಬೇಕು ಎಂದು ಗಡುವು ನೀಡಿದರು.
ರೈತಮುಖಂಡರ ಆಕ್ರೋಶಕ್ಕೆ ಮಣಿದ ಸಿಜಿಎಂ ಸಂಜೀವ್ ಕುಮಾರ್, ಈ ಕೂಡಲೇ ಆಡಳಿತ ಮಂಡಳಿಗೆ ವಿಷಯ ತಿಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ರೈತಸಂಘ ಮುಖಂಡರಾದ ಕೆನ್ನಾಳು ವಿಜಯಕುಮಾರ್, ಎಣ್ಣೆಹೊಳೆಕೊಪ್ಪಲು ಮಂಜು, ರಘು, ಪಿಎಸ್‌ಎಸ್‌ಕೆ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಡಿ.ಲೋಕೇಶ್, ಕಾರ್ಯದರ್ಶಿ ಎನ್.ಮಹೇಶ್ ಇತರರು ಇದ್ದರು.