ಜಿಲ್ಲೆ

ಪಿಎಸ್ಐ ಹಗರಣ ವಾಸನೆ ಮೂಗಿಗೆ ಬಡಿದಿತ್ತು ಎಂದ ಮಾಜಿ ಎಡಿಜಿಪಿ ಭಾಸ್ಕರ್ ರಾವ್

ಗೋಪಾಲಕೃಷ್ಣ ಪಾದೂರ್

ಉಡುಪಿ:  ಅಮೃತ ಪಾಲ್ ಯಾವಾಗಲೂ ಮುಖ್ಯಮಂತ್ರಿ ಮನೆಯ ಬಳಿ ಸುಳಿಯುತ್ತಿದ್ದರು.  ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗುತ್ತಾರೆ ಎಂಬ ಊಹಾಪೋಹ ಹರಡಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯಾವುದೋ ಹಗರಣದ ವಾಸನೆ ಈ ಮೊದಲೇ ಗ್ರಹಿಸಿದ್ದೆ ಎಂದು ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಹಾಗೂ ಮಾಜಿ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮಂಗಳವಾರ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತನಾದ ಒಂದೇ ವರ್ಷದಲ್ಲಿ ಅಮೃತ್ ಪಾಲ್ ಆಯುಕ್ತರಾಗಿ ಬರುತ್ತಾರೆ ಎಂಬ ಊಹಾಪೋಹ ಹರಡಿತ್ತು. ನಾನು 90ರ ಬ್ಯಾಚಿನ ಐಪಿಎಸ್ ಅಧಿಕಾರಿ. ಅಮೃತ ಅವರು 95ರ ಬ್ಯಾಚಿನ ಐಪಿಎಸ್ ಅಧಿಕಾರಿ ಐದು ವರ್ಷ ಕಿರಿಯ ಅಧಿಕಾರಿ ಹೇಗೆ ಆಯುಕ್ತರಾಗುತ್ತಾರೆ ಎಂದು ಯೋಚಿಸಿದ್ದೆ. ನಂತರ ಕೆಲವೇ ದಿನಗಳಲ್ಲಿ ಪಿಎಸ್ಐ ಹಗರಣ ಬೆಳಕಿಗೆ ಬಂದಿತ್ತು. ಕೋರ್ಟ್ ನಿರ್ದೇಶನದಲ್ಲಿ ತನಿಖೆ ನಡೆದ ಕಾರಣ ಪ್ರಮುಖ ಆರೋಪಿಗಳ ಬಂಧನವಾಗಿದೆ. ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಎಸಿಬಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇಶ ಆದೇಶ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಈಶ್ವರಪ್ಪ ಮತ್ತೆ ಸಚಿವರಾದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷವಾದರೂ ದಕ್ಷಿಣ ಕನ್ನಡ ಜಿಲ್ಲೆ ಮೇಲೆ ಅವಲಂಬನೆ ಕಡಿಮೆಯಾಗದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಜಿಲ್ಲೆಗೆ ಸ್ವಂತ ವಿಮಾನ ನಿಲ್ದಾಣ ಹಾಗೂ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಅಗತ್ಯವಿದೆ. ಉದ್ಯೋಗ ಸ್ನೇಹಿ ವಾತಾವರಣ ನಿರ್ಮಿಸದಿದ್ದರೆ ಉಡುಪಿ ವೃದ್ಧಾಶ್ರಮ ಆಗಲಿದೆ. ಹೀಗಾಗಿ ಆಮ್ ಆದ್ಮಿ ಪಕ್ಷ  ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಣಾಳಿಕೆ ಜಾರಿಗೊಳಿಸಲಿದೆ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ದಿವಾಕರ ಸನಿಲ್, ಕಾರ್ಯದರ್ಶಿ ವಿವೇಕಾನಂದ ಸನಿಲ್, ಆಸ್ಲಿನ್ ಕರ್ನೇಲಿಯೋ, ವಿಭಾಗ ಪ್ರಮುಖ ಜೆ.ಪಿ. ರಾವ್, ಅಶೋಕ್ ಎಡಮಲೆ ಉಪಸ್ಥಿತರಿದ್ದರು.