ಹಾರೂಗೇರಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ಮತ್ತು ಅಮಾಯಕರಿಗೆ ದಬ್ಬಾಳಿಕೆ ಮಾಡುತ್ತಿರುವ ಠಾಣಾಧಿಕಾರಿ ಮಾಳಪ್ಪ ಪೂಜೇರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆಗ್ರಹಿಸಿದರು.
ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದಿಂದ ಮಂಗಳವಾರ ಪಾದಯಾತ್ರೆ ಕೈಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿದರು. ಬಳಿಕ ಸಿಪಿಐ ಕಚೇರಿಗೆ ತೆರಳಿ ಡಿಎಸ್‌ಪಿ ಪ್ರಶಾಂತ ಮುನ್ನೋಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪಿಎಸ್‌ಐ ಮಾಳಪ್ಪ ಅವರು ತಿಗಣೆ ರಕ್ತ ಹೀರುವಂತೆ ಅಮಾಯಕರಿಂದ ಹಣ ಹೀರುತ್ತಿದ್ದಾರೆ. ಸಿವಿಲ್ ವಿಷಯದಲ್ಲಿ ಭಾಗಿಯಾಗಿ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಮುಖಂಡರಾದ ಈರಪ್ಪ ಚೌಗಲಾ, ಸಿದ್ಲಿಂಗಯ್ಯ ಮಠಪತಿ, ಅಲಖನೂರ ಗ್ರಾಮದ ರಾಮಪ್ಪ ಪೂಜೇರಿ, ಯಲ್ಪಾರಟ್ಟಿ ಗ್ರಾಮದ ಯಲ್ಲಪ್ಪ ಒಡೆಯರ ಮಾತನಾಡಿ,
ಪಿಎಸ್‌ಐ ಮಾಳಪ್ಪ ಅವರಿಂದ ನಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಡಿಎಸ್‌ಪಿ ಪ್ರಶಾಂತ ಮುನ್ನೋಳಿ ಮಾತನಾಡಿ, ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಸುನೀಲಗೌಡ ಪಾಟೀಲ, ನಿಂಗಪ್ಪ ಪಕಾಂಡೆ, ಮಲ್ಲಪ್ಪ ಐನಾಪುರ, ನರಸು ತುಳಸಿಗೇರಿ, ದತ್ತಾ ಸಣ್ಣಕ್ಕಿ, ಮೋಹನ ಲೋಹಾರ, ರಮೇಶ ಖೇತಗೌಡರ, ರಾಜು ಅರಳಿಕಟ್ಟಿ, ಕುಮಾರ ಬನಶಂಕರಿ ಇತರರು ಇದ್ದರು.