ಜಿಲ್ಲೆ

ಬದುಕಿಗೆ ಹೊಸ ಆಯಾಮ ನೀಡುವ ದೀಪಾವಳಿ

Chikkamagaluru

ಬಾಳೆಹೊನ್ನೂರು: ಜಾತಿ, ಮತ, ಭೇದ ತೊರೆದು ಎಲ್ಲರೊಡನೆ ಒಗ್ಗೂಡಿ ದೀಪಾವಳಿ ಆಚರಿಸುತ್ತಿರುವ ಜೇಸಿ ಸಂಸ್ಥೆ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಪಿಎಸ್​ಐ ನೀತು ಆರ್. ಗುಡೆ ಹೇಳಿದರು.

ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ದೀಪಾವಳಿ ಅಂಗವಾಗಿ ಶನಿವಾರ ರಾತ್ರಿ ಜೇಸಿ ವೃತ್ತದಲ್ಲಿ ಆಯೋಜಿಸಿದ್ದ ಬೆಳಕು-ದೀಪಾವಳಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಾವಳಿ ಎಲ್ಲರ ಬದುಕಿಗೂ ಹೊಸ ಆಯಾಮ ನೀಡಲಿದೆ ಎಂದರು.

ದೀಪೋತ್ಸವ ಆಚರಣೆಯೆಂದರೆ ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ತೆರಳುವುದಾಗಿದೆ. ಜೇಸಿ ಸಂಸ್ಥೆ ಎಲ್ಲ ಸದಸ್ಯರೊಂದಿಗೆ ಒಗ್ಗೂಡಿ ಆಚರಿಸುವ ಮೂಲಕ ಸಾಮರಸ್ಯ ಸಾಧಿಸಿದೆ. ಈ ದೀಪಾವಳಿ ಎಲ್ಲರ ಬದುಕಿನಲ್ಲೂ ಹೊಸ ಚೈತನ್ಯ, ಸಂಭ್ರಮ ತರಲಿ ಎಂದು ಹಾರೈಸಿದರು.

ಜೇಸಿ ವಲಯ ತರಬೇತುದಾರ ಚೈತನ್ಯ ವೆಂಕಿ ಮಾತನಾಡಿ, ಪ್ರತಿಯೊಬ್ಬರಿಗೂ ಜ್ಞಾನವೆಂಬ ಬೆಳಕಿನ ಅಗತ್ಯವಿದೆ. ಸುಖ ದುಃಖಗಳೆರಡೂ ಬೆಳಕು-ಕತ್ತಲೆ ಇದ್ದಂತೆ. ಎರಡೂ ಶಾಶ್ವತವಲ್ಲ ಎಂಬುದನ್ನು ಅರಿಯಬೇಕಿದೆ. ಬೆಳಗುವ ದೀಪ ನಮ್ಮ ಬದುಕಿಗೆ ದಾರಿ ತೋರುವ ಮಾರ್ಗದರ್ಶಕವಾಗಿದೆ. ಈ ಮೂಲಕ ಅಜ್ಞಾನದ ಕತ್ತಲೆಯನ್ನು ಪ್ರತಿಯೊಬ್ಬರೂ ದೂರ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.