ಶಿವಾನಂದ ಹಿರೇಮಠ ಗದಗ
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಜರುಗಿರುವುದು ನ್ಯಾಯಲಯದಲ್ಲಿ ಸಾಭಿತಾದ ಹಿನ್ನೆಲೆ 2021ರ ನೋಟಿಫಿಕೇಷನ್ ಅನ್ವಯ ಪೊಲೀಸ್ ಸಬ್ ಇನ್ಸ್ಪೆಕ್ಟರ್(ಪಿಎಸ್ಐ) ನೇಮಕಾತಿಗೆ ಜ.23, 2024ರಂದು ಮರು ಪರೀಕ್ಷೆಯು ಜರುಗಿದೆ. ಆದರೆ, ಮಾ.1 ರಂದು ಕರ್ನಾಟಕ ಪರೀಕ್ಷೆ ಪ್ರಾಧಿಕಾರ(ಕೆಇಎ) ಪ್ರಕಟಿಸಿರುವ ಅಂತಿಮ ಕೀ ಉತ್ತರಗಳು ಗೊಂದಲ ಸೃಷ್ಟಿಸಿವೆ. ಈ ಹಿನ್ನೆಲೆ ಪರೀಕ್ಷೆ ಬರೆದ ಅಭ್ಯಥಿರ್ಗಳಲ್ಲಿ ಆತಂಕ ಮನೆ ಮಾಡಿದೆ. ಅಂತಿಮ ಆಯ್ಕೆ ಪಟ್ಟಿಯಿಂದ ಅರ್ಹ ಸಾವಿರಾರು ಅಭ್ಯರ್ಥಿಗಳು ಹೊರಗುಳಿಯುವ ಸಾಧ್ಯತೆ ಇದೆ. ಅಕ್ರಮ ನೇಮಕಾತಿಯಿಂದಲೇ ಕುಖ್ಯಾತಿ ಪಡೆದಿದ್ದ ಪಿಎಸ್ಐ ನೇಮಕಾತಿ ಪ್ರಕ್ರಿಯೆಗೆ ಮತ್ತೊಂದು ವಿಘ್ನ ಎದುರಾಗಿದೆ.
ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಜರುಗಿದ ನಂತರ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ರಾಜ್ಯ ಸರ್ಕಾರ ಅಕ್ರಮ ಜರುಗದಂತೆ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಂಡಿತ್ತು. ಪರೀಕ್ಷೆ ನಡೆಸಲು ಸ್ವತಂತ್ರ ಸಂಸ್ಥೆಯಾದ ಕೆಇಎಗೆ ಜವಾಬ್ದಾರಿ ನೀಡಿತ್ತು. ಹೀಗಿದ್ದರೂ, ಕೀ ಉತ್ತರಗಳ್ಲಲಿ ಹಲವು ಗೊಂದಲಗಳು ಸೃಷ್ಟಿ ಆಗಿದ್ದು, ಮತ್ತೊಮ್ಮೆ ಪಿಎಸ್ಐ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆ ಮತ್ತೆ ಕೋರ್ಟ್ ಮೆಟ್ಟಿಲೇರಲು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಏನಿದು ಗೊಂದಲ?
ಜ.23, 2024ರಂದು ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳಿಗೆ ಜ.29ರಂದು ತಾತ್ಕಾಲಿಕ ಕೀ ಉತ್ತರ, ಮಾ.1 ರಂದು ಅಂತಿಮ ಕೀ ಉತ್ತರಗಳನ್ನು ಕೆಇಎ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಈ ಉತ್ತರಗಳಲ್ಲಿ ಕೆಲವು ಅಸಂಜಸ ಉತ್ತರಗಳಿವೆ ಎಂದು ಹಲವು ಅಭ್ಯಥಿರ್ಗಳ ಆರೋಪವಿದ್ದು, ಉತ್ತರ ಸರಿಪಡಿಸಲು ಕೆಇಎ ಕದ ತಟ್ಟಿದ್ದಾರೆ. ಆದರೆ ಕೆಇಎ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಕೀ ಉತ್ತರಗಳಲ್ಲೇ ತಪ್ಪು:
*. ಭಾರತದ ಕೊನೆಯ ಗೌವರ್ನರ್ ಜನರಲ್ ಯಾರು? ಎಂಬ ಪ್ರಶ್ನೆಗೆ ಕೆಇಎ ಕೀ ಉತ್ತರಗಳಲ್ಲಿ "ಸಿ ರಾಜಗೋಪಾಲಚಾರಿ' ಎಂದು ತಿಳಿಸಲಾಗಿದೆ. ಆದರೆ, ಲಾರ್ಡ್ ಮೌಂಟ್ ಬ್ಯಾಟನ್ ಕೊನೆಯ ಗೌವರ್ನರ್ ಜನರಲ್ ಆಗಿದ್ದರು ಎಂಬುದನ್ನು ಸರ್ಕಾರ ಅನುಮೋದಿತ 7ನೇ ತರಗತಿ ಪಠ್ಯಪುಸ್ತಕ ಹಾಗೂ ದ್ವೀತಿಯ ಪಿಯುಸಿ ಇತಿಹಾಸ ವಿಷಯದಲ್ಲಿ ಮುದ್ರಿಸಲಾಗಿದೆ.
*2022, ಆ.15 ರಂದು ಭಾರತದ ಅತೀ ಉದ್ದ ಮತ್ತು ಭಾರವಾದ ರೈಲು "ಸೂಪರ್ ವಾಸುಕಿ' ಯಾವ ಸ್ಥಳಗಳ ನಡುವೆ ಸಂಚರಿಸಿತು ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನೇ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ. "ಸೂಪರ್ ವಾಸುಕಿ' ರೈಲು ಛತ್ತಿಸಗಡದ ಕೋರ್ಬಾದಿಂದ ರಾಜನಂದನ್ ನಡುವೆ ಸಂಚರಿಸಿದೆ. ಆದರೆ, ವಾಸುಕಿ ಎಂಬ ರೈಲು ಬಿಲೈ ಮತ್ತು ಕೊರ್ಬಾ ಸ್ಥಳಗಳ ನಡುವೆ ಸಂಚರಿಸಿದೆ. ಸುಪರ್ ವಾಸುಕಿ ರೈಲು ಸಂಚರಿಸಿದ ಸ್ಥಳದ ಬದಲಾಗಿ ವಾಸುಕಿ ರೈಲು ಸಂಚರಿಸಿದ ಸ್ಥಳವನ್ನು ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಿಸಿ, ಅದನ್ನೇ ಕೀ ಉತ್ತರಗಳಲ್ಲಿ ಪ್ರಕಟಿಸಲಾಗಿದೆ. ಇದರಿಂದ ಅಭ್ಯಥಿರ್ಗಳು ಗೊಂದಲದಲ್ಲಿದ್ದಾರೆ.
*ಪ್ರಥಮವಾಗಿ ಮಂಗಳ ಗ್ರಹ ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಿ ನೌಕೆ ಯಾವುದು ಎಂಬ ಪ್ರಶ್ನೆಗೆ ಕೀ ಉತ್ತರಗಳಲ್ಲಿ "ಮ್ಯಾರಿನರ್ ಪೋಲ್ ಎಂದು ಕೀ ಉತ್ತರ ನೀಡಲಾಗಿದೆ. ಆದರೆ, "ಮ್ಯಾರಿನರ್ 4' ನೌಕೆಯು ಅಧ್ಯಯನಕ್ಕೆ ಕಳುಹಿಸಿದ ಮೊದಲ ನೌಕೆ ಆಗಿದೆ. ನಾಸಾ ಕೂಡ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮ್ಯಾರಿನರ್ 4 ಕುರಿತು ಸ್ಪಷ್ಟವಾಗಿ ವಿವರಿಸಿದೆ.
ಹಿನ್ನೆಲೆ ಏನು?
2021ರಲ್ಲಿ 545 ಪಿಎಸ್ಐ ನೇಮಕಾತಿ ಪ್ರಕ್ರಿಯೆ ಜರುಗಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮ ಜರುಗಿತ್ತು. ಈ ಹಿನ್ನೆಲೆ ಹಲವು ವಿದ್ಯಾತಿರ್ಗಳು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಅಕ್ರಮ ನಡೆದಿರುವುದು ಸಾಭಿತಾಗಿತ್ತು ಮತ್ತು ಮರು ಪರೀಕ್ಷೆ ನಡೆಸಲು ನ್ಯಾಯಾಲಯವು ಸ್ವತಂತ್ರ ಸಂಸ್ಥೆಗೆ ಪರೀೆ ನಡೆಸುವ ಜವಾಬ್ದಾರಿ ವಹಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷೆ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಿತು. ಜ.23, 2024ರಂದು ಕೆಇಎ ಪರೀಕ್ಷೆ ನಡೆಸಿತು.