ಜಿಲ್ಲೆ

ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ

ಸುನಿಲ್ ಪೊನ್ನೇಟಿ

ಮಡಿಕೇರಿ:

ಆತ ಅಕ್ಷರಶಃ ಕೊಡಗು ಪೊಲೀಸ್ ಇಲಾಖೆಯ ದೊಡ್ಡ ಶಕ್ತಿ. ವಿಐಪಿ, ವಿವಿಐಪಿಗಳ ರಕ್ಷಣೆ ಎಂದರೆ ಮೊದಲು ನೆನಪಾಗುತ್ತಿದ್ದುದೇ ಈ ಪೃಥ್ವಿ. ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಅಲ್ಲೊಂದು ಬಹುಮಾನ ಖಚಿತ. ಇಂಥ ಪೃಥ್ವಿ ಇನ್ನಿಲ್ಲ. ಹೃದಯಾಘಾತದಿಂದ ಸೋಮವಾರ ಮೃತಪಟ್ಟ ಈತ ಪೊಲೀಸ್ ಇಲಾಖೆಯನ್ನು ದುಃಖದಲ್ಲಿ ಮುಳುಗಿಸಿ ತೆರಳಿದ್ದಾನೆ.

ಕೊಡಗು ಪೊಲೀಸ್ ಇಲಾಖೆ ಶ್ವಾನ ದಳದ 'ಪೃಥ್ವಿ' ಇಲಾಖೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಪೃಥ್ವಿಯ ಹ್ಯಾಂಡ್ಲರ್ ಎಂ.ಆರ್. ಶಿವ ಅವರ ಪಾಲಿಗೆ ಈತ ಒಬ್ಬ ಮಗನಿದ್ದಂತೆ. ಪೃಥ್ವಿ ಇನ್ನಿಲ್ಲ ಎಂದರೆ ಪೊಲೀಸ್ ಇಲಾಖೆಯಲ್ಲಿ ಈಗಲೂ ಯಾರಿಗೆ ಕೂಡ ನಂಬಲಾಗುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸಿದ್ದ ಹೆಗ್ಗಳಿಕೆಯ 8 ವರ್ಷ ಪ್ರಾಯದ ಪೃಥ್ವಿ. ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಪೊಲೀಸ್ ಇಲಾಖೆಗೆ ಅಗತ್ಯ ಇರುವ ಎಲ್ಲಾ ರೀತಿಯ ತರಬೇತಿಯನ್ನು 6 ತಿಂಗಳು ಕಾಲ ಬೆಂಗಳೂರಿನಲ್ಲಿ ಪಡೆದುಕೊಂಡು ಕೊಡಗು ಜಿಲ್ಲೆಗೆ 2017ರಲ್ಲಿ ಪೃಥ್ವಿಯನ್ನು ನಿಯೋಜನೆ ಮಾಡಲಾಗಿತ್ತು. ಹ್ಯಾಂಡ್ಲರ್ ಎಂ.ಆರ್. ಶಿವ ಗರಡಿಯಲ್ಲಿ ಮತ್ತಷ್ಟು ಪಳಗಿದ ಈ ಚುರುಕಿನ ಶ್ವಾನ ಕೊಡಗು ಪೊಲೀಸ್ ಶ್ವಾನ ದಳದ ದೊಡ್ಡ ಆಸ್ತಿ ಆಗಿ ಪರಿವರ್ತನೆ ಆಗಿದ್ದ.

ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಮತ್ತು ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪೃಥ್ವಿ ಪಡೆದುಕೊಂಡಿದ್ದ. ಚೆಕ್ ಪೋಸ್ಟ್ಗಳಲ್ಲಿ ಸ್ಫೋಟಕÀಸ್ತುಗಳ ಸಾಗಾಟ ಪತ್ತೆ ಕರ್ತವ್ಯದಲ್ಲೂ ಮಹತ್ವದ ಪಾತ್ರ ವಹಿಸಿದ್ದ. ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ವಿಐಪಿ ಮತ್ತು ವಿವಿಐಪಿ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಹಾಗೂ ಭದ್ರತಾ ಕರ್ತವ್ಯದಲ್ಲೂ ಪಾಲ್ಗೊಂಡಿದ್ದ.

ಬೆಂಗಳೂರು ಏರ್ ಶೋ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಪೃಥ್ವಿಯದ್ದು. ರಾಜ್ಯಕ್ಕೆ ರಾಷ್ಟçಪತಿ ಭೇಟಿ ಸಂದರ್ಭವೂ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದ. ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ ಹಾಗೂ ಲಕ್ಷದ್ವೀಪದಲ್ಲೂ ಪ್ರಧಾನ ಮಂತ್ರಿ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯವನ್ನು ಪೃಥ್ವಿ ನಿರ್ವಹಿಸಿದ್ದ.

ಪೊಲೀಸ್ ಇಲಾಖೆ ಗೌರವಗಳೊಂದಿಗೆ ಪೃಥ್ವಿಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ಎಸ್.ಪಿ. ಕೆ. ರಾಮರಾಜನ್, ಹ್ಯಾಂಡ್ಲರ್ ಎಂ.ಆರ್. ಶಿವ ಸೇರಿದಂತೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕಣ್ಣೀರ ವಿದಾಯ ಹೇಳಿದ್ದಾರೆ.