ಜಿಲ್ಲೆ

ಭಜನೆ ಮೂಲಕ ಭಗವಂತನ ಸಾಮೀಪ್ಯ

Avinash R

ಬದಿಯಡ್ಕ: ಭಜನೆ ಮೂಲಕ ದೇವರನ್ನು ಸ್ತುತಿಸುವ ಭಕ್ತನಿಗೆ ಭಗವಂತ ಬೇಗನೆ ಒಲಿಯುತ್ತಾನೆ. ಭಜನೆ ಕಷ್ಟಕಾರ್ಪಣ್ಯ ದೂರಮಾಡಿ ನೆಮ್ಮದಿ ನೀಡುತ್ತದೆ. ಆರಾಧನಾಲಯಗಳ ವಿಶೇಷ ದಿನಗಳಲ್ಲಿ ಭಜನೆಗೆ ವಿಶೇಷ ಪರಿಗಣನೆ ನೀಡುತ್ತಿರುವುದು ಸ್ತುತ್ಯರ್ಹ. ಭಜನೆ ಮೂಲಕ ಭಗವಂತನ ಸಾಮೀಪ್ಯ ಎಂದು ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಭಜನಾರ್ಪಣಮ್‌ಗೆ ಚಾಲನೆ ನೀಡಿ ಮಾತನಾಡಿದರು.

ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮಾತನಾಡಿ, ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಏತಡ್ಕ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಮಾನವನನ್ನು ಮಾಧವನನ್ನಾಗಿಸುವ ಭಜನೆ, ಅಸುರಶಕ್ತಿಗಳನ್ನು ನಿವಾರಿಸಿ ದೈವಿಕ ಶಕ್ತಿ ನೀಡುವುದು ಭಜನೆ. ದೇಹದ ಸಕಲ ರೋಗಗಳಿಗೆ ಭಜನೆ ರಾಮಬಾಣ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ ಭಟ್ ಏತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಷಾ ಶಿವರಾಮ ಭಟ್ ಕಾರಿಂಜ ಹಳೆಮನೆ, ಚಂದ್ರಶೇಖರ ಭಟ್ ಏತಡ್ಕ ನಿರೂಪಿಸಿದರು.

ಭಕ್ತ ಮಾರ್ಕಂಡೇಯ ಪ್ರತಿಮೆಗೆ ಗಣ್ಯರು ರುದ್ರಾಕ್ಷಿ ಮಾಲೆ ಅರ್ಪಿಸಿದರು. ಉದ್ಘಾಟನೆ ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರು ಶಿಷ್ಯರೊಂದಿಗೆ ಭಜನಾ ಸಂಕೀರ್ತನೆಗೆ ಧ್ವನಿಗೂಡಿಸಿದರು.