ಜಿಲ್ಲೆ

ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ : ಪವನ್‌ಕುಮಾರ್ ಮಾಲಪಾಟಿ ಹೇಳಿಕೆ

Bellari - Heera Nayak

ಬಳ್ಳಾರಿ : ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಮತ್ತು ಉಮೇದುವಾರರು, ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ಭಾಷಣದ ವೇಳೆ ಅನುಚಿತ ವರ್ತನೆ ಹಾಗೂ ವೈಯಕ್ತಿಕ ಟೀಕೆ ಮಾಡಬಾರದು. ಶಬ್ದ ಬಳಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಚುನಾವಣೆ ವಾತಾವರಣವನ್ನು ಹಾಳುಮಾಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಪ್ರಚಾರ ಭಾಷಣ ಮಾಡುವಾಗ ಬಳಸುವ ಪದಗಳು ಮತ್ತು ವಿಷಯಗಳು ಚುನಾವಣಾ ಆಯೋಗವು ನಿಗದಿ ಪಡಿಸಿರುವ ಮಾದರಿ ನೀತಿ ಸಂಹಿತೆಯಲ್ಲಿನ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಮತ್ತು ಪ್ರಚಾರವನ್ನು ಕೇವಲ ವಿಷಯ ಆಧಾರಿತ ಮತ್ತು ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿ ಪ್ರಚಾರದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕು. ಸಮಾಜದ ಎಲ್ಲ ವರ್ಗದ ಮತದಾರರು ನಿರ್ಭೀತವಾಗಿ ಮತ್ತು ಮುಕ್ತವಾಗಿ ಮತ ಚಲಾಯಿಸುವಂತೆ ಚುನಾವಣೆ ವಾತಾವರಣವನ್ನು ಕಲ್ಪಿಸಲು ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು ಎಂದು ಮಾಹಿತಿ ನೀಡಿದ್ದಾರೆ.
ಚುನಾವಣೆ ನೀತಿ ಸಂಹಿತೆಯಂತೆ ಪ್ರಚಾರದ ವೇಳೆಯಲ್ಲಿ ಪ್ರಚೋದನಕಾರಿ ಹಾಗೂ ಉದ್ವಿಗ್ನತೆ ಉಂಟುಮಾಡುವ, ಅಂಕೆ ಇಲ್ಲದ ಬೈಗುಳಗಳನ್ನು ಅಥವಾ ಹೇಳಿಕೆಗಳನ್ನು, ಸಭ್ಯತೆ ಮೀರಿದ ಹಾಗೂ ಎದುರಾಳಿ ಸ್ಪರ್ಧಿಗಳ ವೈಯಕ್ತಿಕ ನಡವಳಿಕೆ ಹಾಗೂ ಗುಣಗಳ ಬಗ್ಗೆ ಹೇಳಿಕೆಗಳನ್ನು ನೀಡಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ವಾತಾವರಣವನ್ನು ಕಲುಷಿತಗೊಳಿಸಬಾರದು ಎಂದು ಚುನಾವಣಾ ಆಯೋಗವು ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.