chikkamela saandrbhika chithra 
ಜಿಲ್ಲೆ

ಚಿಕ್ಕಮೇಳಗಳ ಕಲಾವಿದರು ಸಂಘಟಕರ ಮೇಲೆ ನಿಬಂಧನೆ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಮೇಳಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಬಾರದು
  • ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದ.ಕ. ಜಿಲ್ಲಾ ಕೇಂದ್ರ ಸಮಿತಿ ಹೇಳಿಕೆ
  • ಅಶಿಸ್ತು, ಅಸಂಬದ್ಧ ನಡತೆಯಿಂದಾಗಿ ಒಕ್ಕೂಟಕ್ಕೆ ದೂರು ಬಂದಿತ್ತು
ಮಂಗಳೂರು: ಮನೆ-ಮನೆಗಳಿಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುವ ಸಂಚಾರಿ ಚಿಕ್ಕಮೇಳ ಅಥವಾ ರಾಧಾಕೃಷ್ಣ ಎನ್ನುವ ಹೆಸರಿನ ಮೇಳದವರ ವರ್ತನೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದು ಎನ್ನುವ ದೃಷ್ಟಿಕೋನವನ್ನಿಟ್ಟುಕೊಂಡು ಕೆಲವೊಂದು ನಿಬಂಧನೆಯನ್ನು ವಿಧಿಸಲಾಗಿದೆ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದ.ಕ. ಜಿಲ್ಲಾ ಕೇಂದ್ರ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚಿಕ್ಕಮೇಳದ ಕೆಲವು ಕಲಾವಿದರ ಅಶಿಸ್ತು, ಅಸಂಬದ್ಧ ನಡತೆಯಿಂದಾಗಿ ಒಕ್ಕೂಟಕ್ಕೆ ದೂರು ಬಂದಿತ್ತು. ಯಕ್ಷಗಾನ ಕಲೆ, ಅದರ ಬಗ್ಗೆ ಜನರಿಗಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕಾದರೆ ಶ್ರದ್ಧೆ, ಶಿಸ್ತು ಇರಲೇಬೇಕು. ಅದಕ್ಕಾಗಿ ಕೆಲವು ನಿಬಂಧನೆಯನ್ನು ಜಾರಿಗೆ ತರಲಾಗಿದೆ. ಸಂಘಟಕರಿಗೂ ಕೆಲ ಕೆಲವು ನಿಬಂಧನೆಯನ್ನು ವಿಧಿಸಲಾಗಿದೆ. ಹೀಗಾಗಿ ಚಿಕ್ಕಮೇಳಗಳು ಒಕ್ಕೂಟದಲ್ಲಿ ನೋಂದಾಯಿಸಿಕೊಂಡು ಪರವಾನಗಿ ಪಡೆದು ನಿರ್ಬಂಧದನುಸಾರ ಪ್ರದರ್ಶನ ನೀಡಬೇಕು ಎಂದವರು ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಗೌರವ ಸಲಹೆಗಾರ ಶರಣ್ ಪೂಜಾರಿ, ಸಂತೋಷ್ ಕರ್ತಲ್ಪ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಮುಖ ನಿಬಂಧನೆಗಳು
  • ಮನೆಯೊಳಗೆ ಪ್ರವೇಶದ ವೇಳೆಯಲ್ಲಿ ದೇವರ ಫೋಟೋ ವೇಷಧಾರಿಯ ಕೈಯಲ್ಲೇ ಇರಬೇಕು.
  • ಗಣಪತಿ ಸ್ವಸ್ತಿಕ್ ಕಡ್ಡಾಯವೆನ್ನಬಾರದು.
  • ಮನೆಯ ವರಾಂಡ ಅಥವಾ ಚಾವಡಿಯಲ್ಲಿ ಮಾತ್ರ ಪ್ರದರ್ಶನ ನೀಡಬೇಕು.
  • ಚೌಕಿಯಿಂದ ಹೊರಟ ಬಳಿಕ ಕಡ್ಡಾಯವಾಗಿ ಯಾವುದೇ ಅಮಲು ಪದಾರ್ಥ ಸೇವಿಸುವಂತಿಲ್ಲ.
  • ಪ್ರದರ್ಶನದ ವೇಳೆ ತಂಡದವರು ಯಾರೂ ಕೂಡ ಮೊಬೈಲ್ ಬಳಸುವಂತಿಲ್ಲ.
  • ಕನಿಷ್ಠ 20 ನಿಮಿಷದ ಒಳಗೆ ಪ್ರದರ್ಶನ ನೀಡಿ ಪ್ರಸಾದ ವಿತರಿಸಬೇಕು.
  • ಪ್ರದರ್ಶನದ ಮುಂಚಿತ ನೀಡುವ ಕರಪತ್ರದಲ್ಲಿ ಯಾವುದೇ ದರವನ್ನು ಸೂಚಿಸುವಂತಿಲ್ಲ.
  • ಸಂಜೆ 6ರಿಂದ 10.30ರ ವರೆಗೆ ಮಾತ್ರ ಪ್ರದರ್ಶನ ನೀಡಬೇಕು.
  • ಯಾವ ತಂಡ ಎಲ್ಲಿಗೆ ಹೋಗಬೇಕೆಂದು ಒಕ್ಕೂಟವೇ ನಿರ್ಧರಿಸುತ್ತದೆ.