ವಿಜಯಪುರ:ಪ್ರಧಾನ ಮಂತ್ರಿಗಳ ಸ್ವನಿಧಿ, ಮಾತೃವಂದನ, ಡೇನಲ್ಮ್ ಹಾಗೂ ಸರ್ಕಾರದ ಇತರೆ ಯೋಜನೆಗಳ ಲಾಭ ಪಡೆದ ಫಲಾನುಭವಿಗಳ ಸಮಗ್ರ, ನಿಖರ ಮಾಹಿತಿಯನ್ನು ಮುಂದಿನ ಸಭೆಯೊಳಗಾಗಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವನಿಧಿ ಯೊಜನೆಯಡಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಅಂತಿಮ ವರ್ಷದಲ್ಲಿ ಪದವಿ ಹಾಗೂ ಡಿಪ್ಲೊಮಾ ಪಾಸಾದ ವಿದ್ಯಾರ್ಥಿಗಳ ಪಟ್ಟಿ ಪಡೆದು ಎಲ್ಲ ಅರ್ಹ ಫಲಾನುಭವಿಗಳಿಗೆ ಯುವನಿಧಿ ಯೋಜನೆ ಲಾಭ ದೊರಕಿಸಲು ಕ್ರಮ ವಹಿಸುವಂತೆ ಹೇಳಿದರು.
ಯೋಜನೆಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಅಮೃತ್ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಗಳು ವಿವಿಧ ವೃತ್ತಿಪರ ಚಟುವಟಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಮೂಲ ಸೌಕರ್ಯ ಒದಗಿಸಿ ಪ್ರತಿಯೊಂದು ಗುಂಪಿಗೆ ಒಂದು ಹೆಸರನ್ನು ಸೂಚಿಸಬೇಕು. ಅದರಂತೆ ಸ್ವ ಸಹಾಯ ಗುಂಪಿನ ಎಲ್ಲ ಸದಸ್ಯರಿಗೆ ಸುರಕ್ಷತೆ ಒದಗಿಸಲು ಕ್ರಮ ಕೈಗೊಳ್ಳಬೇಕು. ನಗರದ ಹಿಟ್ನಳ್ಳಿ ಫಾಮ್ರ್ಗಳಲ್ಲಿ ಕೃಷಿ ಚಟುವಟಿಕೆ ಉತ್ತೇಜಿಸಲು ರೈತ ಮಕ್ಕಳಿಗಾಗಿ ಕೃಷಿ ಹಂಗಾಮುಗಳ ಅನುಸಾರ ಅಂದಾಜು 40 ಕೃಷಿಕ ರೈತರ ಮಕ್ಕಳಿಗೆ 2 ಸರದಿಯಂತೆ ಒಟ್ಟು 80 ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ತರಬೇತಿ ಸಂಖ್ಯೆ ಹೆಚ್ಚುಗೊಳಿಸಲು ಕ್ರಮ ವಹಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ವಿಶೇಷವಾಗಿ ಜಿಲ್ಲೆಯ 15 ಸದಸ್ಯರಂತೆ ಸ್ವ ಸಹಾಯ ಗುಂಪುಗಳು ಪೇಂಟಿಂಗ್ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಸಾಧನೆಗೈದಿದ್ದು, ಅಂತಹ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹಿಸಬೇಕು. ರುಡ್ಸೆಟ್ ಸಂಸ್ಥೆ ವತಿಯಿಂದ ಪ್ರತಿ ವರ್ಷ ಬಿಪಿಎಲ್ ಕಾರ್ಡ್ ಹೊಂದಿದ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿ ಆಯೋಜಿಸುತ್ತಿದ್ದು, ಈ ಮಾದರಿಯಲ್ಲಿಯೇ ನಗರದ ಯುವಕ, ಯುವತಿಯರಿಗೆ ತರಬೇತಿ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಪಾಲಿಕೆ ಆಯುಕ್ತ ವಿಜಕುಮಾರ ಮೆಕ್ಕಳಕಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸಿ.ಬಿ. ಕುಂಬಾರ, ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿ ಮಹೇಶ ಮಾಳವಾಡೇಕರ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಓನರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಪಾಟೀಲ, ಜಿಲ್ಲಾ ಕೈಗಾರಿಕಾ ಉದ್ಯಮಿದಾರರ ಸಂದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಉದ್ಯಮಿ ಪೀಟರ್ ಅಲೆಕ್ಸಾಂಡರ್ ಮತ್ತಿತರರಿದ್ದರು.
ವಿಜಯಪುರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಕೌಶಲಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿದರು. ವಿಜಯಕುಮಾರ ಮೆಕ್ಕಳಕ್ಕಿ, ಗಂಗಾಧರ ಸಂಬಣ್ಣಿ ಮತ್ತಿತರರಿದ್ದಾರೆ.