ನರಗುಂದ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಸೋಮವಾರ ನಡೆಯಿತು. ಸುರೇಶ ಜಿ, ಶೋಭಾ ಮಲ್ಲನಗೌಡ್ರ, ರುದ್ರವ್ವ ಲಿಂಗನಗೌಡ್ರ, ಗಂಗಮ್ಮ ಭೋವಿ ಇತರರಿದ್ದರು. 
ಜಿಲ್ಲೆ

ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆ ನೀಡಿ

ಸೋಮನಾಥ ರೆಡ್ಡಿ

ನರಗುಂದ: ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಶಾಶನಬದ್ಧ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕ ಸುರೇಶ ಜಿ. ಹೇಳಿದರು.

ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಹಾಗೂ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಸಾಮಾಜಿಕ ಭದ್ರತೆ ಇರದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಾಮಾಜಿಕ ಭದ್ರತೆ ನೀಡಬೇಕು. ಸಾರ್ವಜನಿಕರ ಆರೋಗ್ಯ ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್ ತೆಗೆದಿರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಎ.ಶಾಂತಾ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಅತೀ ಕಡಿಮೆ ಸಂಬಳ ನೀಡಲಾಗುತ್ತಿದೆ. ಕಾರ್ಮಿಕರಿಗೆ ಒದಗಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಭಾಗ್ಯಜ್ಯೋತಿ ಹಡಪದ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷೆ ಶೋಭಾ ಮಲ್ಲನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ರುದ್ರಮ್ಮ, ಗಂಗಮ್ಮ, ನಾಗರತ್ನಾ ಇತರರಿದ್ದರು.

ಸಂಘದ ತಾಲೂಕು ಅಧ್ಯಕ್ಷೆಯಾಗಿ ಶೋಭಾ ಮಲ್ಲನಗೌಡ್ರ, ಉಪಾಧ್ಯಕ್ಷರಾಗಿ ರುದ್ರವ್ವ ಗದಿಗೆಪ್ಪ ಲಿಂಗನಗೌಡ್ರ, ಗಂಗಮ್ಮ ಅಶೋಕ ಭೋವಿ, ನಾಗರತ್ನಾ ನಾಯ್ಕರ, ಕಾರ್ಯದರ್ಶಿ ಗೀತಾ ಶಿವಾನಂದ ಉಲ್ಯಳ, ಜಂಟಿ ಕಾರ್ಯದರ್ಶಿಯಾಗಿ ಶೋಭಾ ಹಾಗೂ 18 ಜನರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.