ವೇತನ ಪಾವತಿಸುವಂತೆ ಆಗ್ರಹಿಸಿ ನರೇಗಾ ನೌಕರರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಹಾಂತ ಸ್ವಾಮಿ, ಕೊಟ್ರೇಶ ಜವಳಿ, ಎಂ.ಮಲ್ಲಯ್ಯ, ಶ್ರೀನಿವಾಸ್ ಚಿತ್ರಗಾರ, ಬಿ.ಶರಣಯ್ಯ ಸ್ವಾಮಿ, ಬಾಳಪ್ಪ ತಾಳಕೇರಿ, ಗುರುರಾಜ, ಪಂಪನಗೌಡ ಹಳೇಮನಿ ಇತರರಿದ್ದರು. 
ಜಿಲ್ಲೆ

ನರೇಗಾ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಿ

ಗಾಯತ್ರಿ ಮಾಲಿಪಾಟೀಲ್

ಕೊಪ್ಪಳ: ಐದು ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನರೇಗಾ ನೌಕರರು ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮಾಭಿವೃದ್ಧಿಯಲ್ಲಿ ನರೇಗಾ ಪಾತ್ರ ದೊಡ್ಡದು. ಸಾರ್ವಜನಿಕರಿಗೆ ಸಮರ್ಥವಾಗಿ ಮುಟ್ಟಿಸುತ್ತಿದ್ದೇವೆ. ಆದರೆ, ನಮಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಪ್ರತಿ ತಿಂಗಳು ವೇತನ ದೊರೆಯುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಶಾಲಾ ದಾಖಲಾತಿ, ಕೌಟುಂಬಿಕ ಆರೋಗ್ಯ ಸಮಸ್ಯೆ ಜತೆ ಇನ್ನಿತರ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಡಿಎಎಂ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೇ,ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಗ್ರಾಮ ಕಾಯಕ ಮಿತ್ರರು, ಬಿಎಫ್ ಟಿ ಸೇರಿ ವಿವಿಧ ಹುದ್ದೆಗಳಲ್ಲಿ 250ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಅಳಲು ತೋಡಿಕೊಂಡರು. ಸರ್ಕಾರ ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಸೇವಾ ಭದ್ರತೆ ನೀಡಬೇಕು. ವೇತನ ಪಾವತಿ ವಿಳಂಬ ಮಾಡದೇ ಪ್ರತಿ ತಿಂಗಳು ಪಾವತಿಸಬೇಕು ಎಂದು ಒತ್ತಾಯಿಸಿದರು.

ಸಂಸದ ರಾಜಶೇಖರ ಹಿಟ್ನಾಳ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ವೇತನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಭರವಸೆ ನೀಡಿದರು. ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಅವರಿಗೆ ಮನವಿ ಸಲ್ಲಿಸಲಾಯಿತು.

ನರೇಗಾ ನೌಕರರಾದ ಮೈನುದ್ದೀನ್, ವಿಜಯಲಕ್ಷ್ಮೀ, ಸಯ್ಯದ್ ತನ್ವಿರ್, ಲೀಲಾವತಿ, ಪ್ರಕಾಶ್ ಸಜ್ಜನ್, ದೇವರಾಜ ಪತ್ತಾರ, ಕವಿತಾ ಇತರರಿದ್ದರು.