ಜಿಲ್ಲೆ

ನಮಗೂ ನಿವೃತ್ತಿ ಸೌಲಭ್ಯ ಒದಗಿಸಿಕೊಡಿ

ಯಲ್ಲಾಪುರ: ಏಳನೇ ವೇತನ ಆಯೋಗದ ವರದಿ ಅನುಷ್ಠಾನದಲ್ಲಿ 2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ನಿವೃತ್ತ ನೌಕರರ ಸಂಘದಿಂದ ಶಿರಸ್ತೆದಾರ್ ತಸ್ಲೀಮಾ ಅಸಂದಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ವೇತನ ಶ್ರೇಣಿ ಪರಿಷ್ಕೃತವಾದ ಕಾರಣ ಹೆಚ್ಚಾದ ವೇತನವನ್ನು ನಿವೃತ್ತ ನೌಕರರಿಗೂ ಪಾವತಿಸಬೇಕು. ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಲೆಕ್ಕ ಹಾಕುವ ಉದ್ದೇಶಗಳಿಗೆ ಪರಿಗಣಿಸಬೇಕು. ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ನಿವೃತ್ತ ನೌಕರ ಸಂಘದ ತಾಲೂಕಾಧ್ಯಕ್ಷ ಎಸ್.ಎಲ್. ಜಾಲಿಸತ್ಗಿ, ಪ್ರಮುಖರಾದ ಎಂ.ಬಿ. ಶೇಟ್, ಬಾಬು ಸ್ವಾಮಿ, ಸುನಂದಾ ಪಾಟಣಕರ್, ಎಸ್.ಟಿ. ಭಟ್ಟ, ಜಗದೀಶ ನಾಯ್ಕರ್, ಶಿವಾನಂದ ನಾಯ್ಕ, ಸಂತೋಷ ಶೇಟ್, ಇತರರಿದ್ದರು.