ಜಿಲ್ಲೆ

7 ದಿನದೊಳಗೆ ಮಳೆಹಾನಿ ಸಮೀಕ್ಷೆ ವರದಿ ನೀಡಿ

ತುಮಕೂರು ಡೆಸ್ಕ್

ಅಧಿಕಾರಿಗಳಿಗೆ ಡಿಸಿ ಶುಭಕಲ್ಯಾಣ್​ ಆದೇಶ | ರೈತರಿಗೆ ಡಿಬಿಟಿ ಮೂಲಕ ಪರಿಹಾರ ಹಣ ಪಾವತಿಸಲು ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಸಂಭವಿಸಿರುವ ಮಳೆ ಹಾನಿ ಬಗ್ಗೆ ಜಿಲ್ಲಾಡಳಿತ ವರದಿ ಮಾಡಲು ಇನ್ನೂ ಮೀನಮೇಷ ಎಣಿಸುತ್ತಿದೆ. ಈವರೆಗೂ ವರದಿ ಕೈಸೇರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ವಿಮಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯಲ್ಲಿ ಮಾತನಾಡಿ, ಬೆಳೆ ನಷ್ಟದ ಸಮೀಕ್ಷೆಯನ್ನು 7 ದಿನಗಳೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಹಾಗೂ ಬೆಳೆ ವಿಮೆಗೆ ನೋಂದಣಿಯಾಗಿ ಮಳೆಯಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಕೂಡಲೇ ವಿಮಾ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.


ವಿಮೆಗೆ ನೋಂದಾಯಿಸಿದ ಬೆಳೆ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳ ವಿವರವನ್ನು ವಿಮಾ ಕಂಪನಿ ಅಥವಾ ಕೃಷಿ ಇಲಾಖೆಗೆ 3 ದಿನದೊಳಗಾಗಿ ನೀಡುವಂತೆ ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.


ನಷ್ಟದ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಬೆಳೆ ನಷ್ಟವನ್ನು ನಿರ್ಧರಿಸಲು ವಿಮಾ ಸಂಸ್ಥೆಯವರು ನಷ್ಟ ನಿರ್ಧಾರಕರನ್ನು ನೇಮಿಸಬೇಕು. ನೇಮಿಸಲ್ಪಟ್ಟ ನಷ್ಟ ನಿರ್ಧಾರಕರು ಹಾಗೂ ತಾಲೂಕು, ಹೋಬಳಿಮಟ್ಟದ ಕೃಷಿ ಇಲಾಖಾಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟ ನಿರ್ಧರಿಸಬೇಕು ಎಂದರು. ಮಳೆ ನಷ್ಟ ವರದಿ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆಯಾದ ನಂತರ 15 ದಿನಗಳೊಳಗಾಗಿ ರೈತರಿಗೆ ಡಿಬಿಟಿ ಮೂಲಕ ಪರಿಹಾರ ಹಣ ಪಾವತಿಸಬೇಕು. ಮಳೆ ಹಾನಿಯಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಇದು ಸುವರ್ಣಾವಕಾಶವಾಗಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.


ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್​ ಮಾತನಾಡಿ, ಪೂರ್ಣ ವಿಮಾ ಕಂತು ಪಾವತಿಸಿದ ರೈತರಿಗೆ ಶೇ.100ರಷ್ಟು ಬೆಳೆ ನಷ್ಟ ಹೊಂದಿರುವ ಅಧಿಸೂಚಿತ ಮಳೆಯಾಶ್ರಿತ ಬೆಳೆಗಳಿಗೆ ವಿಮಾ ಪರಿಹಾರ ನೀಡಲಾಗುವುದು. ಜಿಲ್ಲೆಯ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ ಬೆಳೆಗೆ ಪ್ರತಿ ಎಕರೆಗೆ 22865.55 ರೂ., ರಾಗಿ ಬೆಳೆಗೆ 17199.75 ರೂ. ಹಾಗೂ ಶೇಂಗಾ ಬೆಳೆಗೆ 22056.15 ರೂಪಾಯಿಗಳ ವಿಮಾ ಪರಿಹಾರ ನೀಡಲು ಅವಕಾಶವಿದೆ ಎಂದರು.


ಸಭೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಚಂದ್ರಕುಮಾರ್​, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಕೊರಟಗೆರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಓರಿಯಂಟಲ್​ ಇನ್ಸೂರೆನ್ಸ್​ ವಿಮಾ ಕಂಪನಿಯ ಪ್ರತಿನಿಧಿಗಳು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಇದ್ದರು.

ಮಾಹಿತಿ ನೀಡಿ: ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ವಿಮಾ ಯೋಜನೆಯಡಿ ವಿಮಾ ಕಂಪನಿಯಾಗಿ ಓರಿಯಂಟಲ್​ ಇನ್ಶೂರೆನ್ಸ್​ ಕಂಪನಿ ಆಯ್ಕೆ ಮಾಡಲಾಗಿದ್ದು, ಬೆಳೆ ಹಾನಿಗೊಳಗಾದ ರೈತರು ಅರ್ಜಿಯನ್ನು ಕಂಪನಿಯ ಪ್ರತಿನಿಧಿ ಕೊರಟಗೆರೆ ಮೊ.9037581055 ಹಾಗೂ ತುಮಕೂರು ಜಿಲ್ಲೆ- ಮೊ.8088528286 ಅಥವಾ ಕೃಷಿ ಇಲಾಖೆ ಸಹಾಯವಾಣಿ 0816 -2278474, ಮೊ.8884006306, 8884006308 ಸಂಪರ್ಕಿಸಿ ಬೆಳೆ ಹಾನಿ ಕುರಿತು ಮಾಹಿತಿ ನೀಡಬಹುದು. ಜಿಲ್ಲೆಯಲ್ಲಿ ಅತಿ ಹೆಚ್ಚು ದಾಖಲೆ ಮಳೆಯಾಗಿರುವ ಕೊರಟಗೆರೆ ತಾಲೂಕಿನ ಹುಲಿಕುಂಟೆ, ತುಂಬಾಡಿ, ವಡ್ಡಗೆರೆ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ದೊಡ್ಡಸಾಗ್ಗೆರೆ, ಅಕ್ಕಿರಾಂಪುರ ಗ್ರಾಮಗಳಲ್ಲಿ ಬೆಳೆ ನಷ್ಟ ಹೊಂದಿರುವ ಬಗ್ಗೆ ವರದಿಯಾಗಿದೆ. ಬೆಳೆ ನಷ್ಟ ಹೊಂದಿರುವ ರೈತರು ನಷ್ಟ ಹೊಂದಿರುವ ತಮ್ಮ ಬೆಳೆ ವಿವರಗಳನ್ನು ಸಂಬಂಧಿಸಿದ ಗ್ರಾಪಂ ಕಚೇರಿಗೆ ಸಲ್ಲಿಸಬೇಕು. ರೈತರು ತಮ್ಮ ಬೆಳೆ ನಷ್ಟ ವಿವರಗಳನ್ನು ಆ.27ರಂದು ಹುಲಿಕುಂಟೆಯಲ್ಲಿ ಬೆಳಗ್ಗೆ 10ರಿಂದ 12 ಗಂಟೆ, ತುಂಬಾಡಿ ಮಧ್ಯಾಹ್ನ 12ರಿಂದ 3 ಗಂಟೆ ಹಾಗೂ ವಡ್ಡಗೆರೆ ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ, ಆ.28ರಂದು ಬಿ.ಡಿ.ಪುರ ಬೆಳಗ್ಗೆ 10ರಿಂದ 12, ಕ್ಯಾಮೇನಹಳ್ಳಿಯಲ್ಲಿ ಮಧ್ಯಾಹ್ನ 12ರಿಂದ 2 ಗಂಟೆ, ದೊಡ್ಡಸಾಗ್ಗೆರೆ ಮಧ್ಯಾಹ್ನ 2ರಿಂದ 4ರ ವರೆಗೆ ಅಕ್ಕಿರಾಂಪುರದಲ್ಲಿ ಸಂಜೆ 4ರಿಂದ 6ರ ವರೆಗೂ ಸಲ್ಲಿಸಬಹುದು.

ಹೆಸರುಕಾಳು ಖರೀದಿ ಕೇಂದ್ರ ಸ್ಥಾಪನೆ


ತುಮಕೂರು: ಕೇಂದ್ರ ಸರ್ಕಾರ ಹೆಸರುಕಾಳು ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್​ಗೆ 8682 ರೂಪಾಯಿಗೂ ಹೆಚ್ಚಿಸಿದ್ದು, ಶ್ರೀದಲ್ಲಿಯೇ ಜಿಲ್ಲೆಯ ಹುಳಿಯಾರು, ತಿಪಟೂರು, ತುರುವೇಕೆರೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲೆಯಲ್ಲಿ 10,300 ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬೆಳೆಯಲು ಗುರಿ ಹೊಂದಲಾಗಿತ್ತಾದರೂ ಪೂರ್ವ ಮುಂಗಾರಿನಲ್ಲಿ ಮಳೆಯ ಕೊರತೆಯಿಂದ ಕೇವಲ 2466 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಹೆಸರು ಬೆಳೆಯಲು ಸಾಧ್ಯವಾಗಿದ್ದು, ಇಳುವರಿ ಕೂಡ ಕಡಿಮೆಯಿದೆ. ಇಂತಹ ಸಮಯದಲ್ಲಿ ಕನಿಷ್ಠ ಬೆಂಬಲ ಯೋಜನೆಯಲ್ಲಿ ಹೆಸರು ಕೊಂಡುಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಿಗೆ ಕೈಗೆ ಬಂತ ತುತ್ತು ಬಾಯಿಗಿಲ್ಲದಂತಾಗಿದೆ.
ಖರೀದಿ ಕೇಂದ್ರ ಆರಂಭಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧಿಕಾರಿಗಳ ಸಭೆ ನಡೆಸಿ, ಖರೀದಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದಾರೆ. ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್​ ಹೆಸರು ಕಾಳಿಗೆ 8682 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ರೈತರು ಖರೀದಿ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ರೈತರಿಂದ ಗರಿಷ್ಟ 10 ಕ್ವಿಂಟಾಲ್​ ಮತ್ತು ಪ್ರತಿ ಎಕರೆಗೆ 2 ಕ್ವಿಂಟಾಲ್​ನಂತೆ ಹೆಸರುಕಾಳು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಖರೀದಿ ಕೇಂದ್ರಗಳಲ್ಲಿ 90 ದಿನಗಳ ಕಾಲ ಹೆಸರುಕಾಳು ಖರೀದಿ ಮಾಡಲಾಗುವುದು. ಜಿಲ್ಲೆಯ ರೈತರು ಎನ್​ಐಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಬೆಂಬಲ ಬೆಲೆ ಯೋಜನೆ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ ಹೆಸರುಕಾಳು ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 3 ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಆ.29ರಿಂದ ಕಾರ್ಯಾರಂಭಗೊಳ್ಳಲಿವೆ. ರೈತರಿಂದ ಮಾತ್ರ ಹೆಸರುಕಾಳು ಖರೀದಿಸಬೇಕು. ವರ್ತಕರಿಂದ ಖರೀದಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಖರೀದಿ ಪ್ರಮಾಣದ ಮೌಲ್ಯಕ್ಕೆ ತಕ್ಕ ಹಾಗೆ ರೈತರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಬೇಕು.| ಶುಭಕಲ್ಯಾಣ್​ ಜಿಲ್ಲಾಧಿಕಾರಿ