ಹೊಸಕೋಟೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಕೆಯೇ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ಇಲಾಖೆ ಆಯುಕ್ತ ಅಕ್ರಂ ಪಾಷ ಹೇಳಿದರು.
ರಾಜ್ಯಾದ್ಯಂತ ನಡೆಸುವ ವಸತಿ ನಿಲಯಗಳಿಗೆ ಆಹಾರ ಸರಬರಾಜು ಪದ್ಧತಿ ಉನ್ನತೀಕರಣ ಹಾಗೂ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣಗೊಳಿಸಿದ ನಿಲಯ ಪೋರ್ಟಲ್ಗೆ ಶನಿವಾರ ಹೊಸಕೋಟೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳಲ್ಲಿ ಹೊಸ ಆಹಾರ ಸರಬರಾಜು ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಆಹಾರ ಪದ್ಧತಿಯನ್ನು ಗಣಕೀಕರಣಗೊಳಿಸಿದ ಪೋರ್ಟಲ್ ಜಾರಿಗೆ ತಂದು ಕ್ರಾಂತಿಕಾರಕ ಬದಲಾವಣೆಗೆಗೆ ಇಲಾಖೆ ಮುಂದಡಿ ಇಟ್ಟಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಟೆಂಡರ್‌ದಾರರು ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಸಬೇಕು ಎಂದು ಸೂಚಿಸಿದರು.
ಆಹಾರ ಸುರಕ್ಷತೆಗೆ ಆದ್ಯತೆ ನೀಡಿ: ಯಾವುದೇ ರಾಜ್ಯದಲ್ಲೂ ಸರ್ಕಾರದಿಂದ ಇಷ್ಟು ದೊಡ್ಡ ಮಟ್ಟದ ಹಾಸ್ಟೆಲ್‌ಗಳ ನಿರ್ವಹಣೆ ಇಲ್ಲ. ಸರ್ಕಾರ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯುಳ್ಳವಾಗಿರುತ್ತಾರೆ. ವಾರ್ಡನ್‌ಗಳು ಶುಚಿತ್ವ ಮತ್ತು ಆಹಾರ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಉತ್ತಮ ವಾತಾವರಣ ಕಲ್ಪಿಸಬೇಕು. ನೂತನ ಸುಧಾರಿತ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂದು ವಾರ್ಡನ್ ಮತ್ತು ಅಧಿಕಾರಿಗಳಿಗೆ ಆಯುಕ್ತರು ಕಿವಿಮಾತು ಹೇಳಿದರು.
ನಿಲಯ ಪೋರ್ಟಲ್ ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳನ್ನು ಸಂಪೂರ್ಣ ಭಾಗಿಯಾಗಿ ಮಾಡಲಾಗಿದೆ. ಇಡೀ ರಾಷ್ಟ್ರಕ್ಕೆ ಈ ಪದ್ಧತಿ ಮಾದರಿಯಾಗಲಿದೆ.
- ಅಕ್ರಂ ಪಾಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ
ಸಮಸ್ಯೆ ಬಗೆಹರಿಸಲು ತಂತ್ರಾಂಶ
ಹಾಸ್ಟೆಲ್ಗಳಿಗೆ ಆಹಾರ ಪೂರೈಕೆ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಲು ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಪಾರದರ್ಶಕತೆ ಹಾಗೂ ಪರಿಣಾಮಕಾರಿಯಾಗಿ ಆಹಾರ ನೀಡಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಜಂಟಿ ನಿರ್ದೇಶಕ ಪ್ರದೀಪ್ ಬಿ.ಎಸ್. ಹೇಳಿದರು.
ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಆಹಾರ ಸರಬರಾಜು ಪ್ರಕ್ರಿಯೆಯನ್ನು ಈ ಹಿಂದಿನಿಂದಲೂ ಮಾಡುತ್ತಿದ್ದು, ಕಾಲಕಾಲಕ್ಕೆ ತಕ್ಕಂತೆ ಆಹಾರ ಸರಬರಾಜು ಪ್ರಕ್ರಿಯೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತಿದೆ, ಹೊಸ ಬದಲಾವಣೆಗಳನ್ನು ಆಡಳಿತಾತ್ಮಕ ಹಿತದೃಷ್ಟಿ ಹಾಗೂ ಇಲಾಖೆಯ ವಿದ್ಯಾರ್ಥಿನಿಲಯಗಳ ಗುಣಮಟ್ಟ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಸದರಿ ಪ್ರಕ್ರಿಯೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಏನಿದು ನಿಲಯ ಪೋರ್ಟಲ್?
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2597 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಪದ್ಧತಿಯನ್ನು ಉನ್ನತೀಕರಿಸಲು ಹಾಗೂ ಆಹಾರ ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಯೋಜನೆ ಇದಾಗಿದೆ. ಈ ಹೊಸ ಪದ್ಧತಿಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮತ್ತು ಪಾರದರ್ಶಕವಾಗಿ ಆಹಾರ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ವಿದ್ಯಾರ್ಥಿನಿಲಯಗಳಿಗೆ ಅವಶ್ಯವಿರುವ ಆಹಾರ ಸಾಮಗ್ರಿಗಳಿಗಾಗಿ ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಲು ನಿಲಯ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪೂರೈಕೆ ಮಾಡುತ್ತಿರುವ ಆಹಾರ ಸಾಮಗ್ರಿಗಳ ಬಗ್ಗೆ ದೂರುಗಳಿದ್ದರೆ, ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಮೆನುಚಾರ್ಟ್ ಅನುಸಾರ ಕಲ್ಪಿಸಲಾಗುವ ಭೋಜನಾ ವ್ಯವಸ್ಥೆಗೆ ಸಂಬಂಧಿಸಿದಂತೆ ನಿಲಯಮೇಲ್ವಿಚಾರಕರಿಂದ ಪೋಟೊಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಡತನದಿಂದ ಬಂದ ನಾನು ಹಾಸ್ಟೆಲ್ ಜೀವನ ಕಂಡಿದ್ದೇನೆ. ಹೀಗಾಗಿ ಹಾಸ್ಟೆಲ್ ಆಹಾರ ಹೇಗಿರುತ್ತದೆ ಎಂದು ಬಲ್ಲವನಾಗಿದ್ದೇನೆ. ಹೀಗಾಗಿ ಗುಣಮಟ್ಟದ ಆಹಾರ ಪೂರೈಕೆಯೇ ನನ್ನ ಆದ್ಯತೆಯಾಗಿದೆ. ಈ ಉದ್ದೇಶದಿಂದ ಸಂಪೂರ್ಣವಾಗಿ ಆಹಾರ ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ ಹಾಗೂ ಪಾರದರ್ಶಕತೆಯನ್ನು ತರಲು ನಿಲಯ ಪೋರ್ಟಲ್ ಜಾರಿಗೆ ತರಲಾಗಿದೆ.
- ಶಿವರಾಜ್ ಎಸ್.ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ