ಜಿಲ್ಲೆ

ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೌಲಭ್ಯ ಒದಗಿಸಿ

ಕೋಲಾರ ಡೆಸ್ಕ್

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್​ ತಾಕೀತು

ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಆಸ್ಪತ್ರೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿ, ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸುವಂತಾಗಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.

ನಗರ ಹೊರವಲಯದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಕುಂದುಕೊರತೆಗಳ ಬಗ್ಗೆ ಹಾಗೂ ಪರಿಹಾರಗಳ ಬಗ್ಗೆ ಮಾಹಿತಿ ಪಡೆದು, ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಜನಕ್ಕೆ ರ್ನಿಲಕ್ಷ್ಯ, ಖಾಸಗಿ ಆಸ್ಪತ್ರೆಗಳ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಅದನ್ನು ದೂರ ಮಾಡಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ತರುವ ಕೆಲಸ ನಾವು, ನೀವು ಎಲ್ಲರೂ ಒಟ್ಟಾಗಿ ಸೇರಿ ಮಾಡಬೇಕು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದಿಂದ ದೊರೆಯುವ ಉಚಿತ ಔಷಧ ಪೂರೈಕೆ, ಆಂಬುಲೆನ್ಸ್​, ಬೆಡ್​ ಲಭ್ಯತೆ, ಆಕ್ಸಿಜನ್​ ಕೊರತೆಯಾಗಬಾರದು, ಅವಶ್ಯ ಇದ್ದರೆ ಮೊದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಉಚಿತ ಆರೋಗ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಯಾವುದೇ ಕಾರಣಕ್ಕೂ ಬಡವರು ಆರೋಗ್ಯ ವಂಚಿತರಾಗಬಾರದು. ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್​ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್​ಗಳನ್ನು ದೂರವಿಟ್ಟು ನಾಲ್ಕು ಸರ್ಕಾರಿ ಆಂಬುಲೆನ್ಸ್​ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಚಿರಶಾಂತಿ ವಾಹನವನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದರು. ಹೊಸ ವಾಹನವನ್ನು ಕೊಡಿಸಲು ಶಾಸಕ ಕೊತ್ತೂರು ಮಂಜುನಾಥ್​ ಸಮ್ಮತಿ ಸೂಚಿಸಿದರು. ಮೆಡಿಕಲ್​ ಕಾಲೇಜಿಗಾಗಿ ಸಾಕಷ್ಟು ಪ್ರಯತ್ನ ಪಟ್ಟು ಮಂಜೂರು ಮಾಡಿಸಲಾಗಿದೆ. ನಮ್ಮ ಗಮನಕ್ಕೆ ಬರದೆ ಸ್ಥಳ ಪರಿಶೀಲಿಸಲು ಅಧಿಕಾರಿಗಳು ಬಂದಿರುವದರ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತಾಲೂಕಿನಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿ ಕುರಿತು ಚರ್ಚಿಸಿ, ನಿಮ್ಮ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಲಿದೆ. ಯಾವುದೇ ಸಮಸ್ಯೆ ಇದ್ದರೂ ಸರ್ಕಾರ ಪರಿಹಾರ ಒದಗಿಸಲಿದೆ. ಶಿಕ್ಷಣ ಆರೋಗ್ಯ ಸರಿಯಾದರೆ ಎಲ್ಲವೂ ಸರಿಹೋಗುತ್ತದೆ. ಇವುಗಳ ಕಡೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.