ಮಸ್ಕಿ ಭ್ರಮರಂಬಾ ದೇವಸ್ಥಾನದಲ್ಲಿ ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಶೈಕ್ಷಣಿಕ ಸಮಾವೇಶ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಮಸ್ಕಿ ನಾಗರಾಜ, ಬಸವರಾಜ, ಎಸ್‌ಎಲ್ ಕೇಶವರೆಡ್ಡಿ, ಶಾಂತನಗೌಡ, ಪ್ರಕಾಶ ಮಾಲಿ ಪಾಟೀಲ್, ಬಿ.ಬಸವರಾಜ, ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ

ರುದ್ರಪ್ಪ ವಾಲಿ

ಮಸ್ಕಿ: ಜಿಲ್ಲೆಯಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಖಾಸಗಿ ಶಾಲೆಗಳ ಸೇವೆ ಅನನ್ಯವಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.

ಪಟ್ಟಣದ ಭ್ರಮರಂಬಾ ದೇವಸ್ಥಾನ ಆವರಣದಲ್ಲಿ ಶನಿವಾರ ರಾಯಚೂರು ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಶೈಕ್ಷಣಿಕ ಸಮಾವೇಶ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳ ಪರಿಹಾರಕ್ಕಾಗಿ ಸಂಘಟಿತರಾಗಿ ಸರ್ಕಾರದ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸಂಘಟನೆ ಮಾಡಿದ್ದು ಖಾಸಗಿ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾಳಜಿವಹಿಸಬೇಕು ಎಂದರು.

ಮಸ್ಕಿ ತಾಲೂಕು ಘಟಕದ ಗೌರವ ಅಧ್ಯಕ್ಷ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ಸರ್ಕಾರ ಖಾಸಗಿ ಶಾಲೆಗಳಿಗೆ ಅನಗತ್ಯವಾಗಿ ದಾಖಲಾತಿಗಳ ಕ್ರೂಢೀಕರಣಕ್ಕೆ ತೊಂದರೆ ಕೊಡುತ್ತಿದೆ. ಒಂದೇ ಸಲ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ, ಪದೇ ಪದೆ ದಾಖಲು ಕೇಳದಂತೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ಕೊಡಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲ ಮಾತನಾಡಿ, ಜಿಲ್ಲೆಯಲ್ಲಿ ಎರಡು ನೂರಕ್ಕೂ ಹೆಚ್ಚು ಆಡಳಿತ ಮಂಡಳಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರ ಹಿತ ಕಾಪಾಡುವ ಉದ್ದೇಶ ಸಂಘ ಹೊಂದಿದೆ ಎಂದರು.

ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ: ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 196 ಜನ ಶಿಕ್ಷಕರಿಗೆ ಜಿಲ್ಲಾ ಒಕ್ಕೂಟದಿಂದ ಸನ್ಮಾನಿಸಲಾಯಿತು.

ಪ್ರಮುಖರಾದ ಶಾಬುದ್ಧಿನ ಪೋತ್ನಾಳ, ತಮಾಸ್ ಬೆಂಜಮಿನ್, ತರೂರ್ ಬಸವರಾಜ ಪಾಟೀಲ್, ನರೇಂದ್ರನಾಥ, ವೈ. ಟಿ. ಬಸವರಾಜ ಮಂಜುನಾಥ ಸ್ವಾಮಿ, ಶಂಕರಲಿಂಗಯ್ಯ ದೇವದುರ್ಗ, ರವಿ ಕುಮಾರ, ಶಿವಕುಮಾರ ಎನ್ ಇತರರಿದ್ದರು.