ಚಿತ್ರದುರ್ಗ: ಜಿಲ್ಲೆಯ ಕೈಗಾರಿಕಾ ಪ್ರದೇಶ, ಘಟಕಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ, ಕೈಗಾರಿಕಾ ಸ್ಪಂದನಾ ಹಾಗೂ ಪಿಎಂಇಜಿಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಿರಿಯೂರಿನ ಅಕ್ಷಯ ಫುಡ್ ಪಾರ್ಕ್, ಕೆಳಗೋಟೆ ಕೈಗಾರಿಕಾ ಪ್ರದೇಶ, ಚಳ್ಳಕೆರೆ ಕೈಗಾರಿಕಾ ವಸಾಹತು, ಮೇಟಿಕುರ್ಕೆ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಸೌಕರ್ಯ ಒದಗಿಸಬೇಕು ಎಂದರು.
ಹಿರಿಯೂರು ತಾಲೂಕಿನ ಹುಚ್ಚವ್ವನಹಳ್ಳಿ ಅಕ್ಷಯಫುಡ್ ಪಾರ್ಕ್‌ಗೆ ಸಂಪರ್ಕ ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿದೆ ಎಂದು ಉದ್ದಿಮೆದಾರರು ಸಭೆ ಗಮನಕ್ಕೆ ತಂದರು. ಸಂಪರ್ಕ ರಸ್ತೆಗಾಗಿ ಹಿರಿಯೂರು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಸಂಚಾರಕ್ಕೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕೆಂದು ತಾಕೀತು ಮಾಡಿದರು.
ಇಂಡಸ್ಟ್ರೀಯಲ್ ಕಾರಿಡಾರ್‌ಗೆ ಭೂ ಸ್ವಾಧೀನವಾಗಿರುವ ಮೇಟಿಕುರ್ಕೆ ಮತ್ತು ಕರಿಓಬನಹಳ್ಳಿ ಗ್ರಾಮಗಳಲ್ಲಿ ಭೂಸ್ವಾಧೀನ ಜಮೀನು ಪೈಕಿ ಕೆಐಎಡಿಬಿಗೆ ಈಗಾಗಲೇ ಹಸ್ತಾಂತರವಾಗಿರುವ 920-06 ಎಕರೆ ಜಮೀನು ಹಾಗೂ ಹಸ್ತಾಂತರಿಸಲು ಬಾಕಿ ಇರುವ 236.6 ಎಕರೆ ಜಮೀನು ಹಸ್ತಾಂತರಕ್ಕೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಮಾತನಾಡಿ, 2025-26ನೇ ಸಾಲಿಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಕೆವಿಐಬಿ ಮತ್ತು ಕೆವಿಐಸಿಗೆ ಅವಕಾಶ ಕಲ್ಪಿಸಿದೆ. ಆದರೆ ಪ್ರಸ್ತುತ ಸಾಲಿಗೆ ಯಾವುದೇ ಗುರಿ ನಿಗದಿಪಡಿಸಿಲ್ಲ. ಅರ್ಜಿ ಸಲ್ಲಿಕೆಗೆ ಗುರಿ ತಿಳಿದ ಬಳಿಕ ಬ್ಯಾಂಕ್‌ಗಳಿಗೆ ಶಿಫಾರಸು ಮಾಡಲಾಗುವುದು ಎಂದರು.
ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲಿಸಲಾಯಿತು. ಜಿಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಮಂಜುನಾಥ್ ಇತರರಿದ್ದರು.