ಜಿಲ್ಲೆ

ಕಾರಾಗೃಹದ ಬಂಧಿಗಳಿಗೆ ಅಗತ್ಯ ಸೌಲಭ್ಯ ನೀಡಿ

ಹಾಸನ: ಕೈದಿಗಳಿಗೆ ಶಿಕ್ಷಣ ಮತ್ತು ಆಸಕ್ತಿಗೆ ಪೂರಕವಾಗಿ ವೃತ್ತಿ ತರಬೇತಿ ನೀಡಿ, ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನಾಗಿ ರೂಪಿಸಿದರೆ ಅಪರಾಧ ಪ್ರಕರಣಗಳು ತಗ್ಗುತ್ತವೆ. ಇದಕ್ಕೆ ಪೂರಕವಾಗಿ ಎಲ್ಲ ಇಲಾಖೆಗಳು ಕಾರ್ಯ ಚಟುವಟಿಕೆ ರೂಪಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾರಾಗೃಹದ ಸಂದರ್ಶಕ ಮಂಡಳಿಯ ಅಧ್ಯಕ್ಷೆ ಲತಾ ಕುಮಾರಿ ತಿಳಿಸಿದ್ದಾರೆ.

ಹಾಸನ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಕಾರಾಗೃಹ ಮಂಡಳಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರಾಗೃಹದಲ್ಲಿ ಆಧಾರ್ ಕಾರ್ಡ್ ಹೊಂದಿರದ ಬಂಧಿಗಳಿಗೆ ಕಾಲ ಕಾಲಕ್ಕೆ ಆಧಾರ್ ನೋಂದಣಿ ಶಿಬಿರ ಏರ್ಪಡಿಸಬೇಕು. ಅವರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಅವರಿಗೆ ಬಿಪಿಎಲ್ ಕಾರ್ಡ್, ಆರೋಗ್ಯ ಕಾರ್ಡ್, ಕಾರ್ಮಿಕ ಇಲಾಖೆಯ ಮತ್ತು ಉಚಿತ ಬ್ಯಾಂಕ್ ಖಾತೆ ಮಾಡಿಸಬೇಕು ಎಂದು ತಿಳಿಸಿದರು. ಕಾರಾಗೃಹದಲ್ಲಿನ ಸ್ವಚ್ಛತೆ, ಉತ್ತಮ ಆಹಾರ ಮತ್ತು ಸಿಬ್ಬಂದಿ ಶಿಸ್ತಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಹೇಮಾವತಿ ಮಾತನಾಡಿ, ಕಾರಾಗೃಹದಲ್ಲಿ ಯೋಗ ಮತ್ತು ಧ್ಯಾನ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಮನ ಪರಿವರ್ತನೆಗಳು ನಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ ದಾಕ್ಷಾಯಿಣಿ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಸಂದರ್ಶಕರ ಮಂಡಳಿಯ ಸದಸ್ಯರಾದ ಚಂದ್ರಶೇಖರ್, ಬಿ.ಆರ್.ಉದಯ್ ಕುಮಾರ್, ರೂಪಾ ಹಾಸನ್, ಜಿಲ್ಲಾ ಕಾರಾಗೃಹದ ಅಧೀಕ್ಷಕ ಆರ್. ಪ್ರಸನ್ನ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.