ಬೆಂಗಳೂರು: ಸಮುದಾಯ ಆರೋಗ್ಯ ಗುತ್ತಿಗೆ ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ತುಮಕೂರಿನ ಸಿದ್ಧಗಂಗಾ ಮಠದಿಂದ ಕಾಲ್ನಡಿಗೆ ಜಾಥ ಮೂಲಕ ಬೆಂಗಳೂರಿಗೆ ಆಗಮಿಸಿದ ಸಂದ ಸದಸ್ಯರು, ಗುತ್ತಿಗೆ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಮಿತ ಗಾಯಕವಾಡ್ ಮಾತನಾಡಿ, ಮುಂಚೂಣಿಯಲ್ಲಿ ನಿಂತು ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವುದು ಎನ್ಎಚ್ಎಂ ಸಿಬ್ಬಂದಿ. ಕಾರ್ಮಿಕ ಕಾಯ್ದೆಯಡಿ ನೀಡಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ವಿಲವಾಗಿದೆ ಎಂದು ಆರೋಪಿಸಿದರು. ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆಗ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು ಸಹ ಯಾವುದೇ ಬೇಡಿಕೆಯನ್ನು ಬಗೆಹರಿಸಿಲ್ಲ. ಇದರಿಂದಾಗಿ ಹೋರಾಟ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ನಾಯಕ ಬಣಕಾರ, ಖಜಾಂಚಿ ಬಿ.ಬಿ.ಗಿಡ್ಡೇಗೌಡ, ಪದಾಧಿಕಾರಿಗಳಾದ ಶಿವ ಪ್ರಕಾಶ್, ರಮೇಶ್, ಕುಮಾರ್, ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.