ಜಿಲ್ಲೆ

ಜಾತಿ ವರ್ಗೀಕರಣಕ್ಕೆ ಅನುಗುಣವಾಗಿ ಒಳ ಮೀಸಲಾತಿ ಕೊಡಿ, ಬಳಿಕ ಸರ್ಕಾರಿ ಹುದ್ದೆಗಳ ಭರ್ತಿ ಮಾಡಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಸಮೀಕ್ಷೆಯ ಅವಧಿಯನ್ನು ಪುನಃ ಮುಂದೂಡಬಾರದು. ವರದಿ ಮಂಡನೆಯ ಬಳಿಕ ಮಾದಿಗ ಜನಸಂಖ್ಯೆಗೆ ಅನುಗುಣವಾಗಿ ತ್ವರಿತ ಒಳ ಮೀಸಲಾತಿಯನ್ನು ಒದಗಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಎರಡು ಬಾರಿ ಪರಿಶಿಷ್ಟ ಜಾತಿ ಸಮೀಕ್ಷೆ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಸ್ತುತ ಪ್ರಕ್ರಿಯೆಯು ಉತ್ತಮವಾಗಿ ನಡೆಯುತ್ತಿದೆ. ಆದರೆ, ಇದರ ವರದಿಯನ್ನು ತ್ವರಿತವಾಗಿ ಮಂಡಿಸಿ, ವಾಸ್ತವಾಂಶವನ್ನು ತಿಳಿಸಬೇಕಾಗಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಮಾದಿಗ ಒಳ ಮೀಸಲಾತಿ ಜನಕ ಮಂದಕೃಷ್ಣರ ನೇತೃತ್ವದಲ್ಲಿನ ಹೈದರಾಬಾದ್ ದಿಗ್ಬಂಧನ, ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ, ರಸ್ತೆ ತಡೆ ನಿರಂತರ ಹೋರಾಟದ ಫಲವಾಗಿ ಆಂಧ್ರದಲ್ಲಿ ಬೇಡಿಕೆ ಸಾಕಾರಗೊಂಡಿದೆ. ಅಲ್ಲಿ ಜನಾಂಗಕ್ಕೆ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಆದರೆ, ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಡೆತಡೆಗಳು ಉಂಟಾಗಿವೆ. ಇವುಗಳನ್ನು ತೊಡೆದು ಹಾಕಿ, ಒಳ ಮೀಸಲಾತಿ ಪಡೆಯುವ ಸನಿಹಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಒಳ ಮೀಸಲಾತಿ ಪರ ಮತ್ತು ವಿರೋಧದ ವಾದ ಪ್ರತಿವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹೊಂದಿವೆ ಎಂಬ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಇದರಿಂದ ಕರ್ನಾಟಕದಲ್ಲಿ ಕ್ರಾಂತಿಕಾರಿ ತೀರ್ಮಾನ ಕೈಗೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಪಕ್ಷಗಳು ಒಮ್ಮತದ ನಿಲುವನ್ನು ಹೊಂದಿವೆ ಎಂದರು.
ಮುಖಂಡರಾದ ಎಸ್.ಎಂ.ಮುನಿಯಪ್ಪ, ದೇವರಾಜ್, ತಿರುಮಳಪ್ಪ, ಬಿ.ಎನ್.ಗಂಗಾಧರ್ ಮತ್ತಿತರರು ಇದ್ದರು.

*ಸರ್ಕಾರದ ಮೇಲೆ ಒತ್ತಡ
ರಾಜ್ಯದಲ್ಲಿರುವ ಮಾದಿಗ ಜನಸಂಖ್ಯೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಲಾಗುತ್ತಿದೆ. ಇದಕ್ಕೆ ಒಳ ಮೀಸಲಾತಿ ವರದಿ ಜಾರಿಯಾಗುವವರೆಗೂ ರಾಜ್ಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಸರ್ಕಾರಿ ನೌಕರರ ಹುದ್ದೆಗಳನ್ನು ಭರ್ತಿ ಮಾಡಬಾರದು. ಯಾವ ಇಲಾಖೆಯಲ್ಲಿ ಎಷ್ಟು ಮಂದಿ ಪರಿಶಿಷ್ಟ ಜಾತಿ, ಉಪಜಾತಿಗಳು, ಇತರ ವರ್ಗದ ನೌಕರರು ಇರುವ ಪ್ರಮಾಣದ ಬಗ್ಗೆ ಪ್ರತಿ ಇಲಾಖೆಯವರು ಮಾಹಿತಿ ಸಲ್ಲಿಸಬೇಕು ಎಂದು ಮಾಜಿ ಸಚಿವರು ಮನವಿ ಮಾಡಿದರು