ಜಿಲ್ಲೆ

ಬೆಳೆ ಹಾನಿಗೆ ಮಧ್ಯಂತರ ಪರಿಹಾರ ನೀಡಲಿ

ದೀಪಕ ತಲವಾಯಿ

ಹಿರೇಕೆರೂರ: ಮೂರು ತಿಂಗಳಿನಿಂದ ಹಾವೇರಿ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿದ್ದು, ಕೂಡಲೇ ಮಧ್ಯಂತರ ಪರಿಹಾರ ಮತ್ತು ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ರೈತರು ಸಾಲ ಮಾಡಿ ಎರಡು ಸಲ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಅತಿವೃಷ್ಟಿಯಿಂದ ಶೇ. 70ರಷ್ಟು ಬೆಳೆ ಜಲಾವೃತಗೊಂಡು ಸಂಪೂರ್ಣ ನಾಶವಾಗಿದೆ. ಹತ್ತಿ, ಸೋಯಾಬೀನ್, ಭತ್ತ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆಯ ಹಲವು ಬೆಳೆಗಳು ಹಾನಿಗೀಡಾಗಿವೆ. ಇದರಿಂದಾಗಿ ಮಾಡಿದ ಸಾಲ ಹೇಗೆ ತೀರಿಸಬೇಕು ಎಂದು ರೈತರು ಚಿಂತಾಕ್ರಾಂತರಾಗಿದ್ದಾರೆ. ಹೀಗಾಗಿ ಕೂಡಲೆ ಸೂಕ್ತ ಮಧ್ಯಂತರ ಪರಿಹಾರ ಘೊಷಿಸಬೇಕು ಹಾಗೂ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಈ ಬಗ್ಗೆ ಅಧಿವೇಶನದಲ್ಲಿ ರ್ಚಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ.ಗಳಂತೆ ಪರಿಹಾರ ಘೊಷಣೆ ಮಾಡಬೇಕು. ಬ್ಯಾಂಕ್​ಗಳು ಬಲವಂತದ ಸಾಲ ವಸೂಲಿ ನಿಲ್ಲಿಸಬೇಕು. ಕೃಷಿ ಮತ್ತು ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳು ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸಿ, ನಿಷ್ಪಕ್ಷಪಾತ ವರದಿಯನ್ನು ಸರ್ಕಾರ ಹಾಗೂ ವಿಮಾ ಕಂಪನಿಗಳಿಗೆ ನೀಡಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಮಾಲತೇಶ ಪೂಜಾರ, ಶಾಂತನಗೌಡ ಪಾಟೀಲ, ಈರಪ್ಪ ಮಳ್ಳೂರ, ಶಂಕ್ರಪ್ಪ ಮರ್ಕಳ್ಳಿ, ಹಾಲಪ್ಪ ಮಡಿವಾಳರ, ಪುಟ್ಟಪ್ಪ ಸಿದ್ದಪ್ಪಳವರ ಹಾಗೂ ರೈತರು ಇದ್ದರು.