ಜಿಲ್ಲೆ

ಗೋಪಿನಾಥಂ ಗ್ರಾಪಂಗೆ ಮೂಲ ಸೌಕರ್ಯ ಕಲ್ಪಿಸಿ

Mysuru - Desk - Naveen Kumar H P

ಹನೂರು : ತಾಲೂಕಿನ ಗಡಿ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ರೈತ ಸಂಘಟನೆಯ ಪದಾಧಿಕಾರಿಗಳು ಶನಿವಾರ ರಾತ್ರಿ ಹೊಗೇನಕಲ್ ಫಾಲ್ಸ್‌ನಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ತಾಲೂಕಿನ ಗಡಿ ಗೋಪಿನಾಥಂ ಗ್ರಾಪಂ ವ್ಯಾಪ್ತಿಯಲ್ಲಿನ ಪುದುಕಾಡು, ತೇಂಗಕೊಂಬು, ಪುಂಗಂ, ಅಪ್ಪುಕಾಮ್‌ಪಟ್ಟಿ, ಜಂಬೂರ್‌ಪಟ್ಟಿ, ಮಾರಿಕೊಟ್ಟಾಯಿ ಹಾಗೂ ಆಲಂಬಾಡಿ ಗ್ರಾಮದಲ್ಲಿ ಜನರು ಕಳೆದ ಹಲವು ದಶಕಗಳಿಂದಲೂ ವಾಸಿಸುತ್ತಿದ್ದಾರೆ. ಆದರೆ ಇಲ್ಲಿನ ಕುಟುಂಬಗಳಿಗೆ ಮನೆ ಹಕ್ಕುಪತ್ರ ನೀಡಿಲ್ಲ. ಕಾವೇರಿ ನದಿ ದಡದಲ್ಲಿದ್ದರೂ ಸಮರ್ಪಕ ಕುಡಿಯುವ ನೀರಿನ ಸೌಕರ್ಯವಿಲ್ಲ ಎಂದು ಬೇಸರಿಸಿದರು.

ಸಮರ್ಪಕ ವಿದ್ಯುತ್, ರಸ್ತೆ ಹಾಗೂ ಚರಂಡಿ ಸೌಕರ್ಯವಿಲ್ಲ. ಸರ್ಕಾರದ ವಿವಿಧ ಯೋಜನೆಯಡಿ ಸಿಗುವ ಮನೆ ಸೌಕರ್ಯವೂ ಇಲ್ಲಿನ ಜನರಿಗೆ ಸಿಕ್ಕಿಲ್ಲ. ಆಸ್ಪತ್ರೆಯೂ ಇಲ್ಲ. ಜತೆಗೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಹಾಗೆಯೇ ಕಾವೇರಿ ನದಿ ತೀರದ ಅರಣ್ಯ ಪ್ರದೇಶದಲ್ಲಿ ಪಾರಂಪರಿಕವಾಗಿ ಇಲ್ಲಿನ ಜನರು ಕೃಷಿ ಮಾಡುತ್ತಿದ್ದು, ವಾಸಿಸುತ್ತಿದ್ದಾರೆ. 2012ರಲ್ಲಿ ಕೇಂದ್ರ ಸರ್ಕಾರ ಪಾರಂಪರಿಕ ಅರಣ್ಯ ವಾಸಿಗಳು ಹಾಗೂ ಬುಡಕಟ್ಟು ಜನರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಅಧಿಸೂಚನೆ ಹೊರಡಿಸಿದೆ. ಆದರೂ ಮೂಲ ಸೌಕರ್ಯವನ್ನು ಒದಗಿಸಿಲ್ಲ. ಇದರಿಂದ ಇಲ್ಲಿನ ಜನರು ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ಕಷ್ಟದ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಆದ್ದರಿಂದ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಮನವಿ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ಅವರು ಜನಸಂಖ್ಯೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಕಾಲಂ 11ರಲ್ಲಿನ ಸಮಸ್ಯೆಗಳ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಆರ್‌ಟಿಸಿ ಬಗ್ಗೆಯೂ ಚರ್ಚಿಸಲಾಗಿದೆ. ಇನ್ನು ಮೂಲ ಸೌಕರ್ಯ ಒದಗಿಸುವ ಸಂಬಂಧ ಜಿಪಂ ಸಿಇಒ ಅವರ ಜತೆ ಚರ್ಚಿಸಿ ಕ್ರಮವಹಿಸಲಾಗುವುದು. ಆಸ್ಪತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಶಾಸಕರನ್ನು ಯೋಜನೆಯನ್ನು ರೂಪಿಸಿದ್ದಾರೆ. ಜತೆಗೆ ರಸ್ತೆ ಅಭಿವೃದ್ಧಿ ಪಡಿಸುವ ಸಂಬಂಧ ಶಾಸಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶಿಕ್ಷಕರ ನಿಯೋಜನೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಡಿಸಿಎಫ್ ಡಾ.ಸಂತೋಷ್‌ಕುಮಾರ್, ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಗೌರವಾಧ್ಯಕ್ಷ ರಾಜಣ್ಣ, ಮುಖಂಡರಾದ ತಂಗವೇಲು, ರತ್ನವೇಲು, ಪಳನಿಸ್ವಾಮಿ ಹಾಗೂ ಇನ್ನಿತರರು ಇದ್ದರು.