ಬಂಕಾಪುರ: ನಿವೇಶನಗಳ ಪಹಣಿ ವಿತರಣೆಗೆ ಸಂಬಂಧಿಸಿದಂತೆ ಪುರಸಭೆ ಇಂಜಿನಿಯರ್ ಅನ್ನು ಶಾಸಕ ಯಾಸೀರಖಾನ್ ಪಠಾಣ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನಿವೇಶನ ದಾಖಲೆ ವಿತರಣೆ ವಿಷಯ ಚರ್ಚೆಗೆ ಬಂದಿತು. ಆಗ ಮಾತನಾಡಿದ ಶಾಸಕ ಪಠಾಣ, ತಹಶೀಲ್ದಾರ ಪ್ಲಾಟ್‌ನಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ. ಆ ಜಾಗದಲ್ಲಿ ಮನೆ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, ಇಡೀ ಬಡಾವಣೆಯ ನಿವಾಸಿಗಳಿಗೆ ಪಹಣಿ ನೀಡದೇ ಸತಾಯಿಸುತ್ತಿದ್ದೀರಿ. ಇದರಿಂದ ಅಲ್ಲಿನ ನಿವಾಸಿಗಳಿಗೆ ಮೂಲಸೌಲಭ್ಯ ದೊರೆಯದಂತಾಗಿದೆ. ಯಾರೊ ಒಬ್ಬರ ಹಿತಾಸಕ್ತಿಗೆ ಇಡೀ ಬಡಾವಣೆ ಜನರಿಗೆ ತೊಂದರೆ ಕೊಡುವುದು ಯಾವ ನ್ಯಾಯ ಎಂದು ಇಂಜಿನಿಯರ್ ಮಾಲತೇಶ ಅಗಡಿಗೆ ಪ್ರಶ್ನಿಸಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.
ಕ್ಷೇತ್ರದ ಶೇ. ೫೦ರಷ್ಟು ಜನಸಂಖ್ಯೆ ಹೊಂದಿರುವ ಶಿಗ್ಗಾಂವಿ, ಸವಣೂರ ಮತ್ತು ಬಂಕಾಪುರ ಪಟ್ಟಣಕ್ಕೆ ತೆವರಮೆಳ್ಳಳ್ಳಿ ಕೆರೆ, ಮೋತಿ ತಲಾಬ, ನಾಗನೂರ ಕೆರೆಗಳಿಂದ ಶಾಶ್ವತವಾಗಿ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ೩೦೦ ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
೨ ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ದುರ್ಗಾದೇವಿ ಹೊಂಡ ದುರಸ್ತಿ ಮತ್ತು ವಿಶೇಷ ಅನುದಾನದಡಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಮಲ್ಲಪ್ಪನ ಕೆರೆ ಅಭಿವೃದ್ಧಿ ಪಡಿಸಲಾಗುವುದು. ತಗ್ಗು ಪ್ರದೇಶವಾಗಿರುವ ಕಲಕಂಡಿ ಪ್ರದೇಶದಲ್ಲಿ ಸಂಗ್ರಹವಾಗುವ ನೀರು ಹೊರ ಹಾಕಲು ೪.೪೫ ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಪಶು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ವಸತಿ ಗೃಹ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್ ನಿರ್ಮಾಣ, ನಾಡ ಕಚೇರಿಗೆ ಹೊಸ ಕಟ್ಟಡ ಹಾಗೂ ೨ ಕೋಟಿ ರೂ. ಅನುದಾನದಲ್ಲಿ ಪುರಸಭೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಮುಖ್ಯಾಽಕಾರಿ ಶಿವಾನಂದ ಅಜ್ಜನ್ನವರ, ಸದಸ್ಯರಾದ ಅಯೂಬಖಾನ್ ಪಠಾಣ, ಸತೀಶ ಆಲದಕಟ್ಟಿ, ಮಹಮ್ಮದಗೌಸ್‌ಗುಲ್ಮಿ, ಆಂಜನೇಯ ಗುಡಗೇರಿ, ರಾಜು ಬಡ್ಡಿ, ರವಿ ಕುರಗೋಡಿ, ತಹಮೀದ ಖಾಜಿ, ಗೀತಾ ದೇಸಾಯಿ ಬಸವರಾಜ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.