ಗುಂಡ್ಲುಪೇಟೆ : ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯ ಜತೋಥು ಹುಸೇನ್ ನೇತೃತ್ವದ ನಿಯೋಗ ಶುಕ್ರವಾರ ಬಂಡೀಪುರ ಅರಣ್ಯದೊಳಗಿರುವ ಆಡಿನಕಣಿವೆ ಆದಿವಾಸಿ ಹಾಡಿಗೆ ಭೇಟಿ ಆದಿವಾಸಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿತು.
ತಮ್ಮ ಹಾಡಿಗೆ ಮೂಲ ಸೌಕರ್ಯಗಳಿಲ್ಲದೆ ವನ್ಯಜೀವಿಗಳಂತೆ ಇನ್ನೂ ಕಾಡಿನಲ್ಲಿ ಬದುಕುತ್ತಿರುವ ಬಗ್ಗೆ ಆದಿವಾಸಿಗಳು ಅಳಲು ತೋಡಿಕೊಂಡರು. ಇಷ್ಟು ವರ್ಷಗಳಾದರೂ ಸರ್ಕಾರ ನಮ್ಮ ಹಾಡಿಗೆ ರಸ್ತೆ ನಿರ್ಮಿಸಿಲ್ಲ. ಬಸ್ ಸೌಕರ್ಯಗಳಿಲ್ಲದಿರುವುದರಿಂದ ಎಲ್ಲಿಗೇ ಹೋದರೂ ಹುಲಿ, ಚಿರತೆ, ಆನೆಗಳ ಭೀತಿಯ ನಡುವೆ ಕಾಲ್ನಡಿಗೆಯಲ್ಲಿ ಹೋಗಬೇಕಾಗಿದೆ ಎಂದು ದೂರಿದರು.
ಯಾರಿಗಾದರೂ ಆರೋಗ್ಯ ತಪ್ಪಿದರೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಬಂಡೀಪುರದಲ್ಲಿ ವಸತಿ ಶಾಲೆಯಿದ್ದರೂ ಹುಲಿ ಚಿರತೆಯ ಭಯದಿಂದ ಅಲ್ಲಿಗೂ ಕಳಿಸಲು ಭಯವಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಹಿಂದಿನಂತೆ ನಮಗೆ ಕಾಡಿನೊಳಗೆ ಹೋಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು. ಸರ್ಕಾರ ನಮಗೆ ಆಂಧ್ರ ಮತ್ತು ತಮಿಳುನಾಡು ರಾಜ್ಯ ಮಾದರಿಯಲ್ಲಿ ಆರ್‌ಸಿಸಿ ಮನೆ ನಿರ್ಮಾಣ ಮಾಡಲು ಹೆಚ್ಚಿನ ಅನುದಾನ ನೀಡಬೇಕು. ರಸ್ತೆ ನಿರ್ಮಿಸಿ ಕಾಲಕಾಲಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದಲೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರಿಗೆ ಇನ್ನೂ ಉತ್ತಮ ಸವಲತ್ತುಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹುಸೇನ್ ಭರವಸೆ ನೀಡಿದರು.
ಆಯೋಗದ ನಿರ್ದೇಶಕ ಡಾ.ಕಲ್ಯಾಣ್ ರೆಡ್ಡಿ, ಆಪ್ತಸಹಾಯಕ ಅಶೋಕ್ ಕುಮಾರ್ ಲಕ್ಕರ್ಸು, ಹಿರಿಯ ಪರಿಶೀಲನಾಧಿಕಾರಿ ಅಕ್ಷಯ್ ತ್ರಿಪಾಟಿ, ಸಲಹೆಗಾರ ಎಂ.ಕಿರಣ್ ಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಸರ್ಕಲ್ ಇನ್‌ಸೆಕ್ಟ್ಟರ್ ಎನ್.ಜಯಕುಮಾರ್, ಬಂಡೀಪುರ ಆರ್‌ಎಫ್‌ಒ ಎನ್.ಸಿ.ಮಹದೇವ, ಗಿರಿಜನ ಮುಖಂಡರಾದ ಡಾ.ರತ್ನಮ್ಮ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.
ಸಾಂಪ್ರದಾಯಿಕ ಸ್ವಾಗತ
ತಮ್ಮ ಹಾಡಿಗೆ ಆಗಮಿಸಿದ ನಿಯೋಗವನ್ನು ಆದಿವಾಸಿಗಳು ಡೊಳ್ಳು ಕುಣಿತ ಮತ್ತು ಬುಡಕಟ್ಟು ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಸ್ವಾಗತಿಸಿದರು. ತಮ್ಮ ಸಂಸ್ಕೃತಿಯಂತೆ ಕಾಡಿನ ಹೂವುಗಳಿಂದ ತಯಾರಿಸಿದ ಹಾರ ಹಾಕಿದರು. ಬಿರ್ಸಾಮುಂಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು.