ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸ್ ಉದ್ಘಾಟನೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ್ ಉದ್ಘಾಟಿಸಿದರು. ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಡಾ.ಎಂ.ಜಿ.ಪಾಟೀಲ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎಸ್.ಎಂ.ಸಿದ್ದಾರೆಡ್ಡಿ ಇದ್ದರು. 
ಜಿಲ್ಲೆ

ವಹಿವಾಟಿಗೆ ಸಮೀತವಾಗದೆ ರೈತರಿಗೆ ಮಾಹಿತಿ ಒದಗಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಕೃಷಿ ಪರಿಕರ ಪೂರೈಕೆದಾರರು ಕೇವಲ ವ್ಯಾಪಾರ, ವಹಿವಾಟಿಗೆ ಸಿಮೀತವಾಗದೆ ಕೃಷಿ ತಾಂತ್ರಿಕ ಮಾಹಿತಿಯನ್ನು ರೈತರಿಗೆ ಒದಗಿಸುವ ಮೂಲಕ ವಿಸ್ತರಣಾ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಬೇಕು ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ್ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸ್ ಉದ್ಘಾಟನೆ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃಷಿ ಪರಿಕರ ಮಾರಾಟಗಾರರು, ರೈತರು, ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಜತೆಗೆ ಸಂಪರ್ಕ ಕೊಂಡಿಯಾಗಿರುವ ಕೆಲಸ ಮಾಡಬೇಕು. ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವುದು, ಬೆಳೆ ಪದ್ಧತಿ, ಕೀಟ, ಕೃಷಿಗೆ ಪೂರಕ ಮಾಹಿತಿಯನ್ನು ಮಾರಾಟಗಾರರು ಮಾಡಬೇಕು ಎಂದು ತಿಳಿಸಿದರು.
ಕೃಷಿ ತಂತ್ರಜ್ಞಾನ ಸಂಸ್ಥೆ ಕಾರ್ಯದರ್ಶಿ ಡಾ.ವೀರಣ್ಣ ಕಮತರ್ ಮಾತನಾಡಿ, 48 ವಾರಗಳ ತರಬೇತಿ ಪಡೆದಿರುವ ಕೃಷಿ ಮಾರಾಟಗಾರರು ರೈತರ ಆತ್ಮಸ್ಥೆರ್ಯ ಹೆಚ್ಚಿಸುವ ವಿಚಾರಗಳನ್ನು ತಿಳಿಸಿ ನೈತಿಕತೆಯಿಂದ ರೈತರಿಗೆ ಸೇವೆ ಸಲ್ಲಿಸುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ನಿಷ್ಠೆ, ಪ್ರಾಮಾಣಿಕತೆ ಮತ್ತು ನೈತಿಕತೆಯಿಂದ ಸೇವೆ ಸಲ್ಲಿಸಬೇಕು. ಕೃಷಿ ಪರಿಕರಗಳು ರೈತರಿಗೆ ಮತ್ತು ಭೂಮಿಗೆ ಪೂರಕವಾಗಿರಬೇಕು. ಕೃಷಿ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್.ಅಂಗಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಡಾ.ಎಂ.ಜಿ.ಪಾಟೀಲ್, ಡಾ.ಎ.ಆರ್.ಕುರಬರ, ಡಾ.ಎಂ.ಭೀಮಣ್ಣ, ಡಾ.ಹನುಮಂತಪ್ಪ, ಡಾ.ವಾಣಿಶ್ರೀ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎಸ್.ಎಂ.ಸಿದ್ದಾರೆಡ್ಡಿ ಉಪಸ್ಥಿತರಿದ್ದರು.