ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿರ್ಗತಿಕರಿಗೆ ವಸತಿ ಉದ್ದೇಶಕ್ಕಾಗಿ ಭೂಮಿ ಮಂಜೂರು ಮಾಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ನೇತೃತದಲ್ಲಿ ಆಡಳಿತಾಧಿಕಾರಿ ಶ್ರೀವತ್ಸ ಅವರಿಗೆ ಮನವಿ ಸಲ್ಲಿಸಲಾಯಿತು. ಗೌರಿ, ಶಿವಮ್ಮ, ರವಿ, ನಾರಾಯಣ, ಲಕ್ಷ್ಮೀ, ಮಾದೇವಿ ಇದ್ದರು. 
ಜಿಲ್ಲೆ

ಕಟ್ಟೆಮಳಲವಾಡಿಯಲ್ಲಿ ನಿರ್ಗತಿಕರಿಗೆ ವಸತಿ ಕಲ್ಪಿಸಿ

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿರ್ಗತಿಕ ಕುಟುಂಬಗಳಿಗೆ ವಸತಿ ಉದ್ದೇಶಕ್ಕಾಗಿ ಒಂದು ಎಕರೆ ಭೂಮಿ ಮಂಜೂರು ಮಾಡುವಂತೆ ಗ್ರಾಮ ಆಡಳಿತಾಧಿಕಾರಿಗೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಗ್ರಾಪಂ ಆಡಳಿತಾಧಿಕಾರಿ ಶ್ರೀವತ್ಸ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ನಂತರ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಕಟ್ಟೆಮಳಲವಾಡಿ ಗ್ರಾಮದ ಹಾರಂಗಿ ನಾಲೆಯ ದಂಡೆ ಮತ್ತು ಲಕ್ಷ್ಮಣತೀರ್ಥ ನದಿಯ ದಂಡೆಯಲ್ಲಿ 25 ನಿರ್ಗತಿಕ ಅಲೆಮಾರಿ ಕುಟುಂಬಗಳು 30 ವರ್ಷಗಳಿಂದ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿವೆ. ಸಮಿತಿಯು ಹಲವು ವರ್ಷಗಳಿಂದ ಈ ನಿರ್ಗತಿಕ ಕುಟುಂಬಗಳಿಗೆ ವಸತಿ ಉದ್ದೇಶಕ್ಕಾಗಿ ಭೂಮಿ ಮಂಜೂರು ಮಾಡುವಂತೆ ಒತ್ತಾಯ ಮಾಡುತ್ತಾ ಬಂದಿದೆ. ಆದರೆ ಕಂದಾಯ ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷೃ ವಹಿಸಿರುವುದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ನಿರ್ಗತಿಕ ಕುಟುಂಬಗಳು ಮಳೆಗಾಲದಲ್ಲಂತೂ ಸೋರುವ ಜೋಪಡಿಯ ಗುಡಿಸಲುಗಳಲ್ಲಿ ಮಳೆ, ಗಾಳಿಯಲ್ಲಿ ನೆನೆಯುತ್ತಾ ಮಕ್ಕಳು, ಬಾಣಂತಿಯರು ಕಷ್ಟ ಪಡುತ್ತಿದ್ದಾರೆ. ಕೂಲಿ, ನಾಲಿ ಮಾಡಿ ಬದುಕುವ ಈ ಕುಟುಂಬಗಳಿಗೆ ಅಧಿಕಾರಿಗಳು ಇಷ್ಟು ವರ್ಷಗಳಾದರೂ ಸರಿಯಾದ ನೆಲೆ ಕಲ್ಪಿಸಿಕೊಡದಿರುವುದು ದುರಸೃಷ್ಟಕರ. ಈ ಕೂಡಲೇ ಈ ನಿರ್ಗತಿಕ 25 ಅಲೆಮಾರಿ ಕುಟುಂಬಗಳಿಗೆ ಮನೆ ಇತರ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿ ಶ್ರೀವತ್ಸ, ಈ ಬಗ್ಗೆ ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಗ್ರಾಮದ ಸುತ್ತಮುತ್ತ ಸರ್ಕಾರಿ ಜಾಗವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ. ಜಾಗ ಗುರುತಿಸಿದ ನಂತರ ಮೇಲಕಾರಿಗಳಿಗೆ ವರದಿ ಸಲ್ಲಿಸಿ ಈ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿರ್ಗತಿಕ ಕುಟುಂಬಗಳ ಸದಸ್ಯರಾದ ಶಿವು, ಗೌರಿ, ಶಿವಮ್ಮ, ರವಿ, ನಾರಾಯಣ, ಲಕ್ಷ್ಮೀ, ಮಾದೇವಿ, ರಾಧ, ಪುಟ್ಟಲಕ್ಷ್ಮೀ ಮುಂತಾದವರು ಇದ್ದರು.