ಹುಣಸೂರು: ನಗರೋತ್ಥಾನ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಮತ್ತು ಶಿಕ್ಷಣಕ್ಕಾಗಿ ದಶಕಗಳಿಂದ ಮೀಸಲಿಟ್ಟಿರುವ 96 ಲಕ್ಷ ರೂ.ವನ್ನು ಬಳಕೆ ಮಾಡದೆ ಹುಣಸೂರು ನಗರಸಭೆ ಅಧಿಕಾರಿಗಳು ಬಡಕುಟುಂಬಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮಣ್ ಆರೋಪಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ 1ನೇ ತ್ರೈಮಾಸಿಕ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
10 ವರ್ಷಗಳ ಹಿಂದೆ ಈ ಹಣ ಬಿಡುಗಡೆಯಾಗಿದೆ. ನಗರದಲ್ಲಿ ಹಾಲಿ ಇರುವ ಪೌರಕಾರ್ಮಿಕ ಕಾಲನಿಯಲ್ಲಿ ಒಂದು ಮನೆಯಲ್ಲಿ 2-3 ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕಂದಾಯ ಇಲಾಖೆಗೆ ಸೇರಿದ 2 ಎಕರೆ ಭೂಮಿ ಸರ್ವೇ ನಂ.75ರಲ್ಲಿ ಇದೆಯೆಂದು ಗುರುತಿಸಲಾಗಿದೆ. ಈ ಭೂಮಿಯನ್ನು ಸದ್ಬಳಕೆ ಮಾಡಿಕೊಂಡು ಪೌರಕಾರ್ಮಿಕರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮೂರು ಬಾರಿ ನಿರ್ಣಯ ಅಂಗೀಕರಿಸಿದ್ದರೂ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ ಕಾನೂನುಗಳನ್ನು ಹೇಳಿಕೊಂಡು 10 ವರ್ಷ ಕಳೆದಿದ್ದಾರೆ. ಹೀಗಾದರೆ ಪೌರಕಾರ್ಮಿಕರಿಗೆ ನ್ಯಾಯ ಸಿಗುವುದು ಹೇಗೆ ಎಂದು ಪ್ರಶ್ನಿಸಿದರು.
ನಗರಸಭೆ ಪೌರಾಯುಕ್ತೆ ಉತ್ತರಿಸಿ, ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸಾಲ-ಸೌಲಭ್ಯ ಪಡೆದಾಗ ಅವರ ಸಾಲದ ಖಾತೆಗೆ ನಗರಸಭೆ ಮೀಸಲಿಟ್ಟಿರುವ ಹಣದಲ್ಲಿ ಪ್ರತಿ ಫಲಾನುಭವಿಗೆ ತಲಾ 3 ಲಕ್ಷ ರೂ. ಅನುದಾನ ನೀಡಲು ಅವಕಾಶ ನೀಡಲಾಗಿದೆ. ನಿವೇಶನ ಹೊಂದಿಲ್ಲದವರಿಗೆ ಅವಕಾಶವಿಲ್ಲ ಎಂದರು. ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಮೊದಲು ಸರ್ವೇ ನಂ.75 ರಲ್ಲಿರುವ ಭೂಮಿಯನ್ನು ಗುರುತಿಸಿ ಹದ್ದುಬಸ್ತು ಮಾಡಿ. ನಂತರ ಅದನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ನೀಡುವ ಕಾರ್ಯ ನಗರಸಭೆ ಮಾಡಲಿ. ನಂತರ ವಿವಿಧ ವಸತಿ ಯೋಜನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ವಸತಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಸೂಚಿಸಿದರು.
ವಾರದೊಳಗೆ ಪ್ರಸ್ತಾವನೆ ಸಲ್ಲಿಸಿ: ಸದಸ್ಯ ಲಕ್ಷ್ಮಣ್ ಮಾತನಾಡಿ, ಉಮಾದೇವಿ ಪ್ರಕರಣದ ಅಡಿಯಲ್ಲಿ ನಗರಸಭೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿರುವ 12 ಪೌರಕಾರ್ಮಿಕರ ಪೈಕಿ 10 ಮಂದಿಗೆ 9 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಉಳಿದ ಇಬ್ಬರಾದ ಅಮಾಸಯ್ಯ ಮತ್ತು ದೊರೆಸ್ವಾಮಿ ಅವರು ಯೋಜನೆಯನ್ನು ಪಡೆಯಲು ಅರ್ಹರಾಗಿದ್ದರೂ ಈವರೆಗೆ ನೀಡಿಲ್ಲ. ಕೂಡಲೇ ಈ ಇಬ್ಬರಿಗೂ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಮತ್ತೋರ್ವ ಸದಸ್ಯೆ ನಾಗಮಣಿ ಇದಕ್ಕೆ ದನಿಗೂಡಿಸಿದರು.
ಉಪವಿಭಾಗಾಧಿಕಾರಿ ಮಾತನಾಡಿ, ವಾರದೊಳಗೆ ಈ ಇಬ್ಬರ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪೌರಾಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್, ಮೋಹನಕುಮಾರಿ, ಸಮಾಜ ಕಲ್ಯಾಣಾಧಿಕಾರಿ ಅಶೋಕ್‌ಕುಮಾರ್, ಸೇರಿದಂತೆ ವಿವಿಧ ತಾಲೂಕುಗಳ ಅಧಿಕಾರಿಗಳು ಇದ್ದರು.