ಹನೂರು: ಇಳುವರಿ ಆಧಾರದ ಮೇಲೆ ವಿಮೆ ನೀಡಬೇಕಾಗಿರುವುದರಿಂದ ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ಬೆಳೆ ಕಟಾವು ದತ್ತಾಂಶವನ್ನು ನಿಖರವಾಗಿ ಸಂಗ್ರಹಿಸಿ ವರದಿ ನೀಡಬೇಕು ಎಂದು ಎಂದು ಜಿಲ್ಲಾ ಸಾಂಖ್ಯಿಕ ಸಂಗ್ರಹಾಧಿಕಾರಿ ಗುರು ಮಹದೇವಯ್ಯ ತಿಳಿಸಿದರು.
ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಆಯೋಜಿಸಿದ್ದ ಬೆಳೆ ಕಟಾವು ಪ್ರಯೋಗ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಮುಖ ಆಹಾರ ಮತ್ತು ಆಹಾರೇತರ ಬೆಳೆಗಳನ್ನು ಪ್ರತಿ ಹೆಕ್ಟೇರ್‌ನಲ್ಲಿ ಸರಾಸರಿ ಇಳುವರಿಯನ್ನು ಹೆಚ್ಚಿಸುವುದು, ರೂಢಿಯಲ್ಲಿರುವ ಕೃಷಿ ಪದ್ಧತಿಯನ್ನು ಸುಧಾರಿಸುವುದು, ರೋಗಬಾಧೆಗಳ ಪೂರಕ ಮಾಹಿತಿ ಸಂಗ್ರಹಣೆ ಮಾಡುವುದು ಹಾಗೂ ಇಳುವರಿ ಅಂದಾಜಿನ ಮೇಲೆ ಬೆಳೆ ವಿಮೆಯನ್ನು ಇತ್ಯರ್ಥಪಡಿಸುವುದು ಬೆಳೆ ಕಟಾವು ಪ್ರಯೋಗದ ಉದ್ದೇಶವಾಗಿದೆ. ಈ ಪ್ರಯೋಗ ಕರ್ನಾಟಕದಲ್ಲಿ ಮಾತ್ರ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ನಿಖರವಾಗಿ ದತ್ತಾಂಶವನ್ನು ಸಂಗ್ರಹಿಸಬೇಕು ಎಂದರು.
ಮುಖ್ಯವಾಗಿ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕಾದರೆ ಜಮೀನಿನಲ್ಲಿ ರೈತನ ಜತೆ ಅಧಿಕಾರಿಯ ಫೋಟೋ ಇರಬೇಕು. ಪ್ರಯೋಗದ ವೇಳೆ ಅಧಿಕಾರಿಯ ಹಾಜರಾತಿ ಸಹಿ ಕಡ್ಡಾಯ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಆದ್ದರಿಂದ ತರಬೇತಿಯಲ್ಲಿ ಪರಿಪೂರ್ಣ ಮಾಹಿತಿ ಪಡೆದು ಯಾವುದೇ ಲೋಪವಾಗದಂತೆ ದತ್ತಾಂಶ ಸಂಗ್ರಹಿಸಬೇಕು. ಒಂದು ವೇಳೆ ಈ ಸಂಬಂಧ ಸಮಸ್ಯೆಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಮಾತನಾಡಿ, ದತ್ತಾಂಶವನ್ನು ನಿಖರವಾಗಿ ಸಂಗ್ರಹಿಸಿದರೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಆದ್ದರಿಂದ ಪ್ರತಿಯೊಬ್ಬರೂ ಜಮೀನಿಗೆ ತೆರಳಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು ಎಂದರು.
ರಾಜಸ್ವ ನಿರೀಕ್ಷಕ ಶಿವಕುಮಾರ್, ಮಹದೇವಸ್ವಾಮಿ, ಕೃಷಿ ಅಧಿಕಾರಿ ನಾಗೇಂದ್ರ, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಇತರರು ಇದ್ದರು.